ಜನ್ಮ ದಿನವನ್ನು ಆಚರಿಸಿಕೊಳ್ಳುವವರು ವಿಶೇಷವಾಗಿ ಎದುರು ನೋಡುವುದು ತಮ್ಮ ಪ್ರೀತಿ ಪಾತ್ರರಿಂದ ಸಿಗುವ ಉಡುಗೊರೆಗಳನ್ನು. ಅವರು ನೀಡುವ ಉಡುಗೊರೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಅವುಗಳನ್ನು ತಮ್ಮ ಬಳಿ ಜೋಪಾನವಾಗಿ ಇರಿಸಿಕೊಳ್ಳಲು ಬಯಸುತ್ತಾರೆ. ವಿಶೇಷವೆಂಬಂತೆ ಪೆಟ್ರೀಷಿಯಾ ಮೌ ಎಂಬ ಮಹಿಳೆ ತನ್ನ ತಂದೆಯಿಂದ ಅಸಾಮಾನ್ಯ ಉಡುಗೊರೆಯನ್ನು ಪಡೆದಿದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಸಾಕಷ್ಟು ಗಮನ ಸೆಳೆದಿದೆ.
ಪೆಟ್ರೀಷಿಯಾ ತನ್ನ ತಂದೆ ತನಗೆ ಅಸಾಮಾನ್ಯ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅದುವೆ ಕೊಳಕು ನೀರಿನಿಂದ ತುಂಬಿದ ಬಾಟಲಿ. ಅರೆ ಇದೆಂಥಾ ಉಡುಗೊರೆ ಎಂದು ನಿಮಗೆ ಎನಿಸಬಹುದು. ಆದರೆ ಇದು ಆಕೆಯ ಅನುಯಾಯಿಗಳ ಆಸಕ್ತಿಯನ್ನು ಕೆರಳಿಸಿದ್ದು ಮಾತ್ರವಲ್ಲದೇ ಅವಳ ತಂದೆಯಿಂದ ಸಿಕ್ಕ ಜೀವನದ ಮಹತ್ವದ ಪಾಠವನ್ನು ಹೇಳಿದೆ.
ಪೆಟ್ರೀಷಿಯಾ ತಂದೆ ಇದುವರೆಗೂ ವಿಶಿಷ್ಟವಾದ ಉಡುಗೊರೆಗಳನ್ನು ನೀಡಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಅವರಿಗೆ ಪ್ರಥಮ ಚಿಕಿತ್ಸಾ ಕಿಟ್, ಪೆಪ್ಪರ್ ಸ್ಪ್ರೇ, ಎನ್ ಸೈಕ್ಲೋಪೀಡಿಯಾ, ಕೀಚೈನ್ ಮತ್ತು ಅವರು ಬರೆದ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ತಮ್ಮ ತಂದೆ ನೀಡಿದ ಅತ್ಯುತ್ತಮ ಉಡುಗೊರೆಗಳೆಂದು ಪೆಟ್ರೀಷಿಯಾ ಹೇಳಿದ್ದಾರೆ. ಆದಾಗ್ಯೂ ಈ ವರ್ಷದ ಉಡುಗೊರೆಯು ಅಮೂಲ್ಯವಾದ ಜೀವನ ಪಾಠವನ್ನು ಹೇಳಿದೆ.
ಅಲುಗಾಡಿದ ಕೊಳಕು ನೀರಿನ ಬಾಟಲಿಯು ಸಂಕಷ್ಟದ ಸಮಯದಲ್ಲಿ ಜೀವನದ ರೂಪಕವಾಗಿದೆ ಎಂದು ಆಕೆಯ ತಂದೆ ವಿವರಿಸಿದ್ದಾರೆ. ನಾವು ಗಲಿಬಿಲಿಗೊಂಡಾಗ ಅಥವಾ ಚಿಂತೆಯಲ್ಲಿ ಮುಳುಗಿದಾಗ ನಮ್ಮ ದೃಷ್ಟಿಕೋನದಲ್ಲಿ ಎಲ್ಲವೂ ಕಠೋರವಾಗಿ ಮತ್ತು ಹತಾಶೆಯಾಗಿ ಕಾಣಿಸಬಹುದು. ಆದರೆ ಒಮ್ಮೆ ನಾವು ನಮ್ಮ ಶಾಂತತೆಯನ್ನು ಮರಳಿ ಪಡೆದು ನಮ್ಮ ಮನಸ್ಸನ್ನು ನೆಲೆಗೊಳಿಸಿದರೆ ‘ಕೊಳಕು’ ಅಥವಾ ಸಮಸ್ಯೆಗಳು ನಮ್ಮ ಜೀವನದ ಒಂದು ಸಣ್ಣ ಭಾಗವನ್ನು ಮಾತ್ರ ರೂಪಿಸುತ್ತವೆ ಎಂದು ನಾವು ಅರಿತುಕೊಳ್ಳುತ್ತೇವೆ. ದೃಷ್ಟಿಕೋನವನ್ನು ಕಾಪಾಡಿಕೊಳ್ಳುವುದು ಮತ್ತು ಜೀವನದ ಸಕಾರಾತ್ಮಕ ಅಂಶಗಳು ನಕಾರಾತ್ಮಕತೆಗಳನ್ನು ಮೀರಿಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ವಿವರಿಸಿದ್ದಾರೆ.
“ಅಲುಗಾಡಿಸಿದ, ಕೊಳಕು ಬಾಟಲ್ ನೀವು ಗಲಿಬಿಲಿಗೊಂಡಾಗ ಜೀವನವನ್ನು ಸಂಕೇತಿಸುತ್ತದೆ. ಎಲ್ಲವೂ ಕೊಳಕು ಎಂದು ತೋರುತ್ತದೆ. ಆದರೆ ಮನಸ್ಸು ನೆಲೆಗೊಂಡಾಗ, ಕೊಳಕು ಕೇವಲ 10% ಕ್ಕಿಂತ ಕಡಿಮೆ ಬಾಟಲಿಯನ್ನು ಪ್ರತಿನಿಧಿಸುತ್ತದೆ. ದೃಷ್ಟಿಕೋನವನ್ನು ಕಾಪಾಡಿಕೊಳ್ಳುವುದು ಮುಖ್ಯ” ಎಂದು ಪೆಟ್ರೀಷಿಯಾ ತನ್ನ ತಂದೆಯ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಭಾರೀ ಮೆಚ್ಚುಗೆಯ ಕಮೆಂಟ್ ಗಳು ಬಂದಿವೆ.