ಮಹಿಳೆಯೊಬ್ಬಳು, ಮೃತ ತಂದೆಯ ಪತ್ನಿಯಂತೆ ನಟಿಸಿ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆದಿರುವ ಘಟನೆ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ನಡೆದಿದೆ.
ಮೊಹ್ಸಿನಾ ಪರ್ವೇಜ್ ಎಂಬ ಮಹಿಳೆ ವಂಚಿಸಿದಾಕೆ. ಈಕೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಈಕೆಯ ಪತಿಗೆ ಪತ್ನಿ ಮೋಸದಿಂದ ಪಿಂಚಣಿ ಪಡೆಯುತ್ತಿರುವ ವಿಷಯ ತಿಳಿದಿತ್ತು. ದಂಪತಿ ನಡುವೆ ಜಗಳ ನಡೆದ ನಂತರ ಪತಿ ತಮ್ಮ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಅಲಿಗಂಜ್ ನಿವಾಸಿಯಾಗಿದ್ದ ವಿಜರತ್ ಉಲ್ಲಾ ಖಾನ್ ಎಂಬುವವರು ನವೆಂಬರ್ 30, 1987 ರಂದು ಲೇಖ್ಪಾಲ್ (ಸರ್ವೇಯರ್) ಹುದ್ದೆಯಿಂದ ನಿವೃತ್ತರಾದ್ರು. ಅವರು ಜನವರಿ 2, 2013 ರಂದು ನಿಧನರಾದರು. ಅವರ ಪತ್ನಿ ಸವಿಯಾ ಬೇಗಂ ಅವರಿಗಿಂತ ಮೊದಲೇ ನಿಧನ ಹೊಂದಿದ್ದರು.
ತನ್ನ ತಂದೆಯ ಮರಣದ ನಂತರ, ಮಗಳು ಮೊಹ್ಸಿನಾ ಪರ್ವೇಜ್ ತನ್ನ ತಂದೆಯ ಹೆಂಡತಿ ಎಂದು ತೋರಿಸಲು ದಾಖಲೆಗಳನ್ನು ನಿರ್ಮಿಸಿ ಪಿಂಚಣಿ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದಳು. ಮೊಹ್ಸಿನಾ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಪಿಂಚಣಿಯನ್ನು ಹಿಂಪಡೆದುಕೊಂಡಿದ್ದಾಳೆ.
ವಂಚನೆ ನಡೆದಿರುವುದು ಪತಿಗೆ ಗೊತ್ತಿತ್ತು. ಆದರೂ, ದಂಪತಿ ನಡುವೆ ಕಲಹವಾದ ನಂತರ, ಆತ ಪೊಲೀಸರನ್ನು ಸಂಪರ್ಕಿಸಿ ತನ್ನ ಹೆಂಡತಿಯ ವಿರುದ್ಧ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹ್ಸಿನಾಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.