
ಕಲಬುರಗಿ: ಮಹಿಳಾ ಪೊಲೀಸ್ ಮೊಬೈಲ್ ಸಿಡಿಆರ್ ಕದ್ದು ಅದನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡಿದ್ದ ಕಾರಣದಿಂದ ಆಕೆಯ ಮದುವೆ ರದ್ದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಇಬ್ಬರು ಹೆಡ್ ಕಾನ್ ಸ್ಟೆಬಲ್ ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಕಲಬುರಗಿ ಮಹಿಳಾ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ತುಕಾರಾಂ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ವೇದರತ್ನ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಆರ್. ಚೇತನ್ ಆದೇಶ ಹೊರಡಿಸಿದ್ದಾರೆ.
ಇವರಿಬ್ಬರು ಬೇರೆ ಕ್ರೈಂ ನಂಬರ್ ಹಾಕಿ ಮಹಿಳಾ ಕಾನ್ ಸ್ಟೆಬಲ್ ಅವರ ಮೊಬೈಲ್ ಸಿಡಿಆರ್ ಕದ್ದು ಅದನ್ನು ಬೇರೆ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದು, ಆ ವ್ಯಕ್ತಿ ಸಿಡಿಆರ್ ಬಳಸಿಕೊಂಡು ಮಹಿಳಾ ಪೊಲೀಸ್ ಮದುವೆ ನಿಲ್ಲಿಸಿದ್ದ. ಇದರಿಂದಾಗಿ ನೊಂದ ಮಹಿಳಾ ಪೊಲೀಸ್ ನ್ಯಾಯಕ್ಕಾಗಿ ಆಯುಕ್ತರಿಗೆ ಮನವಿ ಮಾಡಿದ್ದಾರೆ. ವಿಚಾರಣೆ ನಡೆಸಿದಾಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಕಾರಾಂ ಮತ್ತು ವೇದರತ್ನ ಅವರನ್ನು ಅಮಾನತು ಮಾಡಲಾಗಿದೆ.