ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಜನರು ಗಣಿಗಾರಿಕೆ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಎಳೆದೊಯ್ದ ಘಟನೆ ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಿಹ್ತಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಆಘಾತಕಾರಿ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಜನರ ಗುಂಪೊಂದು ಮಹಿಳಾ ಅಧಿಕಾರಿ ಮೇಲೆ ಹಲ್ಲೆ ನಡೆಸುತ್ತಿದ್ದು ಅವರನ್ನ ಕೆಟ್ಟ ಪದಗಳಿಂದ ನಿಂದಿಸಲಾಗಿದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ಸಂಬಂಧ ಪೊಲೀಸರು ಮೂರು ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 44 ಮಂದಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದು, ತನಿಖೆ ಪ್ರಾರಂಭಿಸಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಾಟ್ನಾ (ಪಶ್ಚಿಮ) ಎಸ್ಪಿ ರಾಜೇಶ್ ಕುಮಾರ್, ಜಿಲ್ಲೆಯಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸುತ್ತಿದ್ದ ಜಿಲ್ಲಾ ಗಣಿಗಾರಿಕೆ ಅಧಿಕಾರಿ ಮೇಲೆ ಸಮಾಜ ವಿರೋಧಿಗಳ ಗುಂಪು ದಾಳಿ ನಡೆಸಿದ್ದು, 44 ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲಾ ಗಣಿ ಅಧಿಕಾರಿ ಹಾಗೂ ಇಬ್ಬರು ಗಣಿ ನಿರೀಕ್ಷಕರು ಸೇರಿದಂತೆ 3 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.