ಲಖ್ನೋ: ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ 8 ನೇ ತರಗತಿಗೆ ಶಾಲೆ ಬಿಟ್ಟಿರುವ 30 ವರ್ಷದ ಯುವಕ ಗರ್ಭಿಣಿಯೊಬ್ಬರ ಶಸ್ತ್ರಚಿಕಿತ್ಸೆ ಮಾಡಲು ಶೇವಿಂಗ್ ರೇಜರ್ ಬ್ಲೇಡ್ ಬಳಸಿದ್ದು ಶಸ್ತ್ರಚಿಕಿತ್ಸೆ ನಂತರ ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ.
ಆರೋಪಿ ರಾಜೇಂದ್ರ ಶುಕ್ಲಾ ಸೈನಿ ಗ್ರಾಮದಲ್ಲಿರುವ ರಾಜೇಶ್ ಸಾಹ್ನಿ ಎಂಬುವರಿಗೆ ಸೇರಿದ ಚಿಕಿತ್ಸಾಲಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾನೆ. ಈ ಚಿಕಿತ್ಸಾಲಯದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲು ಯಾವುದೇ ವ್ಯವಸ್ಥೆಗಳು ಇಲ್ಲದಿದ್ದರೂ ಕೂಡ ಶೇವಿಂಗ್ ಬ್ಲೇಡ್ ಬಳಸಿಕೊಂಡು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾರೆ ಎಂದು ಮೃತ ಮಹಿಳೆಯ ಪತಿ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ರಾಜೇಂದ್ರ ಶುಕ್ಲಾ ಮತ್ತು ಆಸ್ಪತ್ರೆಯ ಮಾಲೀಕ ರಾಜೇಶ್ ಸಾಹ್ನಿ ಅವರನ್ನು ಬಂಧಿಸಿದ್ದಾರೆ. 12 ನೇ ತರಗತಿ ಪಾಸಾಗಿದ್ದ ರಾಜೇಶ್ ತನ್ನ ಹಳ್ಳಿಯಲ್ಲಿ ಅನುಮತಿ ಇಲ್ಲದೇ ಅಕ್ರಮವಾಗಿ ಆಸ್ಪತ್ರೆ ನಡೆಸುತ್ತಿದ್ದ. ಇದಕ್ಕಾಗಿ ನರ್ಸ್, ಸಹಾಯಕರು ಸೇರಿ ಕೆಲಸಗಾರರನ್ನು ನೇಮಿಸಿಕೊಂಡಿದ್ದ. ಇದೇ ಆಸ್ಪತ್ರೆಯಲ್ಲಿ ಎಂಟನೇ ತರಗತಿ ಓದಿದ್ದ ರಾಜೇಂದ್ರ ಕೆಲಸ ಮಾಡುತ್ತಿದ್ದ. ಆತನೇ ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಹೋಗಿ ಇಬ್ಬರ ಜೀವ ತೆಗೆದಿದ್ದಾನೆ.
ಪ್ರಕರಣದ ತನಿಖೆ ನಡೆಸಿದ ಸುಲ್ತಾನಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಚತುರ್ವೇದಿ ಅವರು ನೀಡಿರುವ ಮಾಹಿತಿಯಂತೆ, ರಾಜಾರಾಮ್ ಎಂಬವರ ಪತ್ನಿ 33 ವರ್ಷದ ಪೂನಮ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗಿದ್ದಾರೆ. ಈ ವೇಳೆ ವೈದ್ಯರ ನಿರ್ಲಕ್ಷದಿಂದ ಮಗು, ತಾಯಿ ಮೃತಪಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಸಲಿಗೆ ಅದು ನೋಂದಾಯಿಸದೇ ಅಕ್ರಮವಾಗಿ ನಡೆಸುತ್ತಿದ್ದ ಆಸ್ಪತ್ರೆ ಎನ್ನುವುದು ಗೊತ್ತಾಗಿದೆ. ಅಲ್ಲದೆ, ಶೇವಿಂಗ್ ಬ್ಲೇಡ್ ನಿಂದ ರಾಜೇಂದ್ರ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿ ರಕ್ತಸ್ರಾವದಿಂದ ಮಹಿಳೆ ಮತ್ತು ಮಗು ಮೃತಪಟ್ಟಿರುವುದು ತಿಳಿದು ಬಂದಿದೆ.
ಬುಧವಾರ ರಾತ್ರಿ ಪೂನಮ್ ಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸೂಲಗಿತ್ತಿ ರಾಧಾ ದುಬೆ ಬಳಿ ಕರೆದುಕೊಂಡು ಹೋಗಲಾಗಿದೆ. ಆಕೆ ದೀಹ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ತಿಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಗಳು ಗಂಭೀರವಾಗಿದ್ದ ಪೂನಮ್ ಗೆ ಚಿಕಿತ್ಸೆ ನೀಡದೆ ರಾಜೇಶ್ ಮಾಲೀಕತ್ವದ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಬಾಲ್ಡಿರಾಯ್ ಪೊಲೀಸ್ ಠಾಣೆ ಅಧಿಕಾರಿ ಅಮರೇಂದ್ರ ಸಿಂಗ್ ತಿಳಿಸಿದ್ದಾರೆ.
ರಾಜೇಶ್ ಆಸ್ಪತ್ರೆಯಲ್ಲಿ ರಾಜೇಂದ್ರನೇ ಬ್ಲೇಡ್ ಬಳಸಿ ಶಸ್ತ್ರಚಿಕಿತ್ಸೆ ಮಾಡಲು ಹೋಗಿ ತೀವ್ರ ರಕ್ತಸ್ರಾವವಾಗಿ ಭಯಗೊಂಡಿದ್ದಾನೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದು, ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆಗಳಿಲ್ಲ ಎಂದು ಹೇಳಿದ್ದಾನೆ. ನಂತರ ಪೂನಮ್ ಳನ್ನು 140 ಕಿಲೋಮೀಟರ್ ದೂರದ ಲಖ್ನೋದ ಕೆಜಿಎಂಯು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇಷ್ಟೆಲ್ಲಾ ಬೆಳವಣಿಗೆಳ ನಡುವೆ ಗಂಭೀರ ಸ್ಥಿತಿಯಲ್ಲಿದ್ದ ಪೂನಮ್, ಶಿಶು ಮೃತಪಟ್ಟಿದ್ದಾರೆ.