ರಾಮನಗರ: ಉದ್ಯಮಿಯೋರ್ವರ ಪತ್ನಿ ಫಾರ್ಮ್ ಹೌಸ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪಿಯಲ್ಲಿ ನಡೆದಿದೆ.
ಇಲ್ಲಿನ ಗಿರಿಗೌಡನ ದೊಡ್ಡಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ಮಹಿಳೆ ಸವ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ ಇದು ಕೊಲೆ ಎಂಬುದು ತಿಳಿದುಬಂದಿದೆ.
ಶಾಂತಿ ಸ್ಟೀಲ್ ಇಂಡಸ್ಟ್ರೀಸ್ ಮಾಲೀಕ ಉದ್ಯಮಿ ಉಗ್ರಪ್ಪ ಅವರ ಪತ್ನಿ ಶಾಂತಮ್ಮ (50) ಕೊಲೆಯಾಗಿರುವ ಮಹಿಳೆ. ಉಗ್ರಪ್ಪ ಪತ್ನಿ ಶಾಂತಮ್ಮ ಹೆಸರಲ್ಲಿ ವಿವಿಧ ಉದ್ಯಮ ನಡೆಸುತ್ತಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿ ಅಗಲಿಕೆಯಿಂದ ನೊಂದಿದ್ದ ಶಾಂತಮ್ಮ ಮಗನೊಂದಿಗೆ ವಾಸವಾಗಿದ್ದರು. ಆದರೆ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದ. ಪತಿ ಹಾಗೂ ಮಗ ಇಬ್ಬರನ್ನೂ ಕಳೆದುಕೊಂಡಿದ್ದ ಶಾಂತವ್ವ ತೀವ್ರವಾಗಿ ನೊಂದಿದ್ದರು.
ಕಗ್ಗಲಿಪುರ ಬಳಿಯ ಫಾರ್ಮ್ ಹೌಸ್ ನಲ್ಲಿ ವಾಸವಾಗಿದ್ದರು. ಶಾಂತಮ್ಮ ಅವರ ಅಕ್ಕನ ಮಗ ವೈದ್ಯ ನಂಜೇಶ್ ಕೇರ್ ಟೇಕರ್ ಆಗಿದ್ದ. ಮಾರ್ಚ್ 5ರಂದು ಶಾಂತಮ್ಮ ಡ್ರೈವರ್ ಕರೆದುಕೊಂಡು ಹೊರ ಹೋಗಿ ವಾಪಸ್ ಫಾರ್ಮ್ ಹೌಸ್ ಗೆ ಬಂದು ಬಾಗಿಲು ತೆರೆಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಶಾಂತಮ್ಮ ಹಿಂದಿನಿಂದ ಬಂದು ತಲೆಗೆ ಹೊಡೆದಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಿದ್ದ ಮೇಲೂ ಅವರ ತಲೆಗೆ ಹೊಡೆದು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಶಾಂತಮ್ಮನನ್ನು ಹತ್ಯೆ ಮಾಡಿರುವುದು ವೈದ್ಯನೋ ಅಥವಾ ಕಾರು ಚಾಲಕನೋ ಎಂಬ ಅನುಮಾನ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆದಿದೆ.