
ಯೂಟ್ಯೂಬ್, ಫೇಸ್ಬುಕ್, ಇನ್‍ಸ್ಟಾಗ್ರಾಮ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ನೀವು ಸಾಕಷ್ಟು ಅಡುಗೆ ರೆಸಿಪಿಗಳನ್ನು, ಅಡುಗೆಗೆ ಸಂಬಂಧಿಸಿದ ರೀಲ್ಸ್‌ಗಳನ್ನು ನೋಡಿರಬಹುದು. ಕೆಲವರ ಪೇಜ್‍ಗಳನ್ನು ಫಾಲೋ ಕೂಡ ಮಾಡುತ್ತಿರಬಹುದು. ಮೊದಲೆಲ್ಲಾ ಅಡುಗೆ ಮಾಡಲು ಬರದೇ ಜನ ಪರದಾಡುತ್ತಿದ್ದರು. ಆದರೆ ಈಗ ರುಚಿಕರವಾದ ನಾನಾ ರೀತಿಯ ಆಹಾರ ಪದಾರ್ಥಗಳ ರೆಸಿಪಿ ನಿಮ್ಮ ಕಣ್ಣ ಮುಂದೆಯೇ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತಿವೆ.
ಇಂಥವುಗಳಲ್ಲಿ ಒಂದು ಭಾರಿ ವೈರಲ್ ಆಗುತ್ತಿರುವುದು ನೀಲಿ ಬಣ್ಣದ ಇಡ್ಲಿ. ಕೆಲ ದಿನಗಳ ಹಿಂದೆ ಕಪ್ಪು ಬಣ್ಣದ ಇಡ್ಲಿ ವೈರಲ್ ಆಗಿತ್ತು. ಇದೀಗ ನೀಲಿಯ ಸರದಿ.
ಹೌದು, ಜ್ಯೋತಿ ಕಿಚನ್ ಎಂಬುವವರು ನೀಲಿ ಬಣ್ಣದ ಇಡ್ಲಿ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಟ್ಟೆ ಮೇಲೆ ನೀಲಿ ಮತ್ತು ಬಿಳಿ ಬಣ್ಣದ ಇಡ್ಲಿಗಳನ್ನು ಜೋಡಿಸಿರುವುದನ್ನು ಕಾಣಬಹುದಾಗಿದೆ. ನೀಲಿ ಬಟಾಣಿ ಹೂವುಗಳಿಂದ ಜ್ಯೋತಿ ಅವರು ಈ ಇಡ್ಲಿಯನ್ನು ತಯಾರಿಸಿದ್ದಾರೆ.
ಈ ಇಡ್ಲಿ ಮಾಡುವ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಮೊದಲಿಗೆ ನೀಲಿ ಬಟಾಣಿ ಹೂಗಳನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಇಡ್ಲಿ ಹಿಟ್ಟಿನೊಂದಿಗೆ ಬರೆಸಿದ್ದಾರೆ. ನಂತರ ಹಿಟ್ಟನ್ನು ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿದ್ದಾರೆ. ಇದಾದ ಮೇಲೆ ಗ್ರೀನ್ ಚಟ್ನಿಯೊಂದಿಗೆ ಬಣ್ಣಬಣ್ಣದ ಇಡ್ಲಿಗಳನ್ನು ಅಲಂಕರಿಸಿ ಉಣಬಡಿಸಿದ್ದಾರೆ.
ಈ ವಿಡಿಯೋವನ್ನು ಇಲ್ಲಿಯವರೆಗೂ ಸುಮಾರು 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬಂದಿದೆ.