ಪುಣೆ: 21 ವರ್ಷದ ಯುವತಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ತನ್ನ ತಾಯಿಯೊಂದಿಗೆ ಸಂಬಂಧ ಹೊಂದಿದ್ದ 42 ವರ್ಷದ ಉದ್ಯಮಿಯೊಬ್ಬರಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉದ್ಯಮಿ ಪುಣೆ ನಗರ ಪೊಲೀಸರಿಗೆ ದೂರು ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ನಂತರ ಯುವತಿಯೊಂದಿಗೆ ಆಕೆಯ ಸ್ನೇಹಿತನನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿತ ಯುವತಿ ತನ್ನ ತಾಯಿಯ ವ್ಯಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ತಾಯಿಗೆ ಉದ್ಯಮಿ ಜೊತೆಗಿನ ಸಂಬಂಧವನ್ನು ತಿಳಿದುಕೊಂಡಳು. ನಂತರ ಆಕೆ ತನ್ನ ಸ್ನೇಹಿತರಿಗೆ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದ ಕೆಲವು ಫೋಟೋ ಮತ್ತು ಇತರ ಮಾಹಿತಿಯನ್ನು ಕಳುಹಿಸಿದ್ದಳು. ಆಕೆ ಮತ್ತು ಆಕೆಯ ಇಬ್ಬರು ಸ್ನೇಹಿತರು ಸೇರಿ ತಾಯಿಯ ಪ್ರೇಮಿಯಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದರು.
ಆರೋಪಿಗಳು ಉದ್ಯಮಿಗೆ ಫೋನ್ ಮಾಡಿ ಆತನಿಂದ 15 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಂದಿಗಿನ ಅಕ್ರಮ ಸಂಬಂಧದ ವಿವರಗಳನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆರಂಭದಲ್ಲಿ ಉದ್ಯಮಿ ಆರೋಪಿಗಳಿಗೆ 2.6 ಲಕ್ಷ ರೂ. ಕೊಟ್ಟಿದ್ದು, ಆದಾಗ್ಯೂ ಹೆಚ್ಚಿನ ಹಣಕ್ಕಾಗಿ ಹಪಹಪಿಸಿದಾಗ ಆತ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾನೆ.
ಉದ್ಯಮಿ ದೂರು ನೀಡಿದ ನಂತರ, ಸುಲಿಗೆ ವಿರೋಧಿ ಸೆಲ್ ಆರೋಪಿಗಳನ್ನು ಹಿಡಿಯಲು ಕ್ರಮ ಕೈಗೊಂಡಿದ್ದು, ಅವರಿಗಾಗಿ ಬಲೆ ಬೀಸಲಾಗಿದೆ. ಯುವತಿಯ ಸ್ನೇಹಿತರಲ್ಲಿ ಒಬ್ಬನಾದ ಯುವಕ ಉದ್ಯಮಿಯಿಂದ 1 ಲಕ್ಷ ರೂಪಾಯಿಗಳನ್ನು ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ನಂತರದಲ್ಲಿ ಪೊಲೀಸರು ಯುವತಿಯನ್ನು ಕೂಡ ಬಂಧಿಸಿದ್ದಾರೆ. ಆಕೆಯ ಇನ್ನೊಬ್ಬ ಸ್ನೇಹಿತನನ್ನು ಹಿಡಿಯಲು ಪ್ರಯತ್ನಗಳು ನಡೆದಿದೆ.