ಗಂಡನಿಲ್ಲದ ವೇಳೆ ಲೈಂಗಿಕ ಕಿರುಕುಳ ನೀಡಿದ ಮಾವನನ್ನು 25 ವರ್ಷದ ಮಹಿಳೆ ಕೊಲೆ ಮಾಡಿದ ಘಟನೆ ತಮಿಳುನಾಡಿನ ಕಿಜತ್ತುವಾಲ್ ನಲ್ಲಿ ನಡೆದಿದೆ.
ಆರೋಪಿಯನ್ನು ಕನಿಮೋಳಿ ಎಂದು ಗುರುತಿಸಲಾಗಿದೆ. ಕನಿಮೋಳಿ ನಾಲ್ಕು ವರ್ಷಗಳ ಹಿಂದೆ ವಿನೋಭ್ ರಾಜನನ್ನು ಮದುವೆಯಾಗಿದ್ದಳು. ವಿನೋಭರಾಜನ ತಂದೆ ಮುರುಗೇಶನ್ ಕನಿಮೊಳಿ ಮನೆಯಲ್ಲಿ ಒಬ್ಬಳೆ ಇದ್ದಾಗ ಲೈಂಗಿಕ ಕಿರುಕುಳ ನೀಡಿದ್ದರು.
ಜುಲೈ 31 ರಂದು ಆಕೆ ಇಲಿ ವಿಷವನ್ನು ಆಹಾರದಲ್ಲಿ ಬೆರೆಸಿ ತನ್ನ ಮುರುಗೇಶನ್ ಗೆ ಕೊಟ್ಟಿದ್ದಾಳೆ. ವಿಷಪೂರಿತ ಆಹಾರವನ್ನು ಸೇವಿಸಿದ ನಂತರ ಮುರುಗೇಶನ್ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 1 ರಂದು ಮುರುಗೇಶನ್ ಮೃತಪಟ್ಟಿದ್ದಾನೆ. ಮನೆಯವರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ನಂತರದಲ್ಲಿ ಖಿನ್ನತೆಗೆ ಒಳಗಾದ ಕನಿಮೊಳಿ ತಾನು ಮಾವ ಮುರುಗೇಶನಿಗೆ ವಿಷ ಕುಡಿಸಿದ್ದೇನೆ ಎಂದು ಹಳ್ಳಿಯ ಆಡಳಿತಾಧಿಕಾರಿ(ವಿಡಿಒ) ಹರಿಕೃಷ್ಣನ್ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಹರಿಕೃಷ್ಣನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕನಿಮೋಳಿಯನ್ನು ಬಂಧಿಸಿದ್ದಾರೆ.