ಕೆಲವೊಮ್ಮೆ ಮಾನವೀಯತೆ ಇಲ್ಲದ ಜನರು ಕಟುಕರಂತೆ ವರ್ತಿಸುತ್ತಾರೆ. ಇದರ ಪರಿಣಾಮ ಮತ್ತೊಬ್ಬರಿಗೆ ಭಾರೀ ಆಘಾತವಾಗಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಗಳೂ ಇರುತ್ತವೆ. ಇದೇ ರೀತಿಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ವರ್ತಿಸಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿರುವುದು ಬೆಳಕಿಗೆ ಬಂದಿದೆ. ವಿಪುಲ್ ಭಿಮಾನಿ ಎಂಬುವರು ತಮಗೆ ಮತ್ತು ತಮ್ಮ ಸಂಬಂಧಿಕರಿಗೆ ಆದ ನೋವನ್ನು ವಿಡಿಯೋ ಸಮೇತ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಪ್ರಕಾರ, ವಿಪುಲ್ ಅವರು ತಮ್ಮ ಸಂಬಂಧಿ ಮತ್ತು ಆಂಟಿಯ ಜೊತೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ವಿಮಾನ ನಿಲ್ದಾಣಕ್ಕೆ ತಲುಪಿ ಸೆಕ್ಯೂರಿಟಿ ಚೆಕ್ ಮಾಡಿಸುವುದು ಕೊಂಚ ತಡವಾಯಿತು. ಈ ಹಿನ್ನೆಲೆಯಲ್ಲಿ ವಿಪುಲ್ ತಮಗೆ ಚೆಕ್-ಇನ್ ಮಾಡಲು ನೆರವಾಗುವಂತೆ ಏರ್ ಇಂಡಿಯಾ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕದ ಸಿಬ್ಬಂದಿ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.
ಆದರೂ, ಹೇಗೋ ಈ ಮೂವರು ಸೆಕ್ಯೂರಿಟಿ ಚೆಕ್ ಪೂರ್ಣಗೊಳಿಸಿಕೊಂಡರು. ನಂತರ ತಾವು ವಿಮಾನವೇರಲು ಪ್ರವೇಶ ದ್ವಾರಕ್ಕೆ 5 ನಿಮಿಷದಲ್ಲಿ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ, ಅವರ ಆಂಟಿ ಹಿರಿಯ ನಾಗರಿಕರಾಗಿದ್ದರಿಂದ ವೇಗವಾಗಿ ಪ್ರವೇಶ ದ್ವಾರ ತಲುಪಲು ಸಾಧ್ಯವಾಗಿರಲಿಲ್ಲ. ಏದುಸಿರು ಬಿಡುತ್ತಲೇ ಕೇವಲ 2 ನಿಮಿಷಗಳಲ್ಲಿ ಪ್ರವೇಶ ದ್ವಾರವನ್ನು ತಲುಪಿದ್ದಾಯಿತು. ಆದರೆ, ಅಷ್ಟರ ವೇಳೆಗೆ ಏರ್ ಲೈನ್ ಸಿಬ್ಬಂದಿ ಪ್ರವೇಶ ದ್ವಾರವನ್ನು ಬಂದ್ ಮಾಡಿದ್ದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ವಿಮಾನ ಹೊರಡಲು ಇನ್ನೂ 30 ನಿಮಿಷವಿತ್ತು.
ಆದರೆ, ಬಾಗಿಲು ಬಂದ್ ಮಾಡಿದ್ದರಿಂದ ನಮ್ಮ ಆಂಟಿ ಆಘಾತಕ್ಕೀಡಾದರು. ನನ್ನ ಸಂಬಂಧಿ ಅಂತಿಮ ವರ್ಷದ ಮೌಖಿಕ ಪರೀಕ್ಷೆಗೆ ಹಾಜರಾಗಬೇಕಿತ್ತು. ಒಂದು ವೇಳೆ ವಿಮಾನ ತಪ್ಪಿದರೆ ಭಾರೀ ನಷ್ಟ ಉಂಟಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ವಿಮಾನವೇರಲು ಸಿಬ್ಬಂದಿ ಅವಕಾಶ ಮಾಡದಿರುವುದನ್ನು ಕಂಡು ಆಂಟಿ ಕುಸಿದು ಬಿದ್ದರು.
ಈ ವೇಳೆ, ತುರ್ತು ವೈದ್ಯಕೀಯ ನೆರವು ನೀಡುವಂತೆ ಸಿಬ್ಬಂದಿಗೆ ಪರಿಪರಿಯಾಗಿ ಬೇಡಿಕೊಂಡರೂ ಅವರ ಮನಸು ಕರಗಲಿಲ್ಲ. ಚಿಕಿತ್ಸೆ ನೆರವು ನೀಡುವ ಬದಲು ಸಿಬ್ಬಂದಿ ಭದ್ರತಾ ಸಿಬ್ಬಂದಿಯನ್ನು ಕರೆಯಿಸಿ ನಮ್ಮನ್ನು ವಿಮಾನನಿಲ್ದಾಣದಿಂದ ಹೊರಹಾಕುವ ಪ್ರಯತ್ನ ಮಾಡಿದರು ಎಂದು ವಿಪುಲ್ ತಮ್ಮ ಪೋಸ್ಟ್ ನಲ್ಲಿ ದೂರಿದ್ದಾರೆ. ಈ ಮೂಲಕ ಏರ್ ಇಂಡಿಯಾ ಸಿಬ್ಬಂದಿ ಪ್ರಯಾಣಿಕರ ಬಗ್ಗೆ ತೋರಿದ ಅಮಾನವೀಯತೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.