ಅತ್ತೆ-ಸೊಸೆ ಎಂದರೆ ಸದಾ ಕಿರಿಕಿರಿಯೇ ಎನ್ನುವ ಭಾವನೆ ಇದೆ. ಆದರೆ ಎಲ್ಲಾ ಅತ್ತೆ-ಸೊಸೆಯಂದಿರೂ ಹೀಗೆ ಇರುವುದಿಲ್ಲ. ಅಲ್ಲಲ್ಲಿ ಉತ್ತಮ ಸಂಬಂಧ ಹೊಂದಿರುವ ಅತ್ತೆ-ಸೊಸೆಯಂದಿರೂ ಇರುತ್ತಾರೆ ಎನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ.
ಕೋರಿಯನ್ ಅತ್ತೆಯೊಂದಿಗೆ ಭಾರತೀಯ ಸೊಸೆ ತೆಲುಗು ಸಿನೆಮಾದ ಈ ಜನಪ್ರಿಯ ಹಾಡಿಗೆ ನೃತ್ಯ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೋರಿಯಾದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿರುವ ಅತ್ತೆ-ಸೊಸೆ ಅದ್ಭುತವಾಗಿ ನೃತ್ಯಕ್ಕೆ ಸ್ಟೆಪ್ ಹಾಕಿದ್ದಾರೆ. ರಾ ರಾ ರೆಡ್ಡಿ, ಐ ಆ್ಯಮ್ ರೆಡಿ ಹಾಡಿಗೆ ಇವರಿಬ್ಬರೂ ಉತ್ಸಾಹದಿಂದ ಕುಣಿದ ರೀತಿ ನೆಟ್ಟಿಗರನ್ನು ಬೆರಗಾಗಿಸಿದೆ.
ಹ್ಯಾನ್ಬ್ಯಾಕ್ ಇದು ಕೋರಿಯನ್ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಕೋರಿಯನ್ ಅರಮನೆಯ ಹೊರಗೆ ಇವರಿಬ್ಬರೂ ನರ್ತಿಸಿದ್ದಾರೆ. ಸೊಸೆ ಗುಲಾಬಿ ಬಣ್ಣದ ಹ್ಯಾನ್ಬ್ಯಾಕ್ ಧರಿಸಿದ್ದರೆ, ಅತ್ತೆ ನೀಲಿ ಬಣ್ಣದ ಹ್ಯಾನ್ಬ್ಯಾಕ್ ಧರಿಸಿದ್ದಾಳೆ.
ಈ ಜಗತ್ತಿನಲ್ಲಿ ಎಷ್ಟೇ ಕತ್ತಲು ತುಂಬಿದ್ದರೂ ಪ್ರೀತಿ ಅದನ್ನು ಗೆಲ್ಲುತ್ತದೆ, ಸದಾ ಪ್ರೀತಿಸಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಇದಾಗಲೇ 75 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.