ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಎಂದು ಮಹಿಳೆಯೊಬ್ಬರು ಸುಳ್ಳು ದಾಖಲೆ ಸಲ್ಲಿಸಿ ಖಾಸಗಿ ವಿಮಾ ಕಂಪನಿಯಿಂದ ಬರೋಬ್ಬರಿ 3 ಕೋಟಿ ವಿಮೆ ಪಡೆದು, ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಪತ್ನಿಯ ವಿರುದ್ದ ಇನ್ಶ್ಯೂರೆನ್ಸ್ ಕಂಪನಿಯು ಕೋರಮಂಗಲ ಠಾಣೆಯಲ್ಲಿ ದೂರು ದಾಖಲು ಮಾಡಿದೆ.
ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬುವರು ಟಾಟಾ ಎಐಜಿ ಲೈಫ್ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕ 51,777 ರೂಪಾಯಿ ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷದ ಪಾಲಿಸಿ ಕಟ್ಟುವ ಮುನ್ನ ಕೃಷ್ಣ ಪ್ರಸಾದ್ ಮೃತಪಟ್ಟಿದ್ದರು. ಕೃಷ್ಣ ಪ್ರಸಾದ್ ಅವರು ಈ ಪಾಲಿಸಿಗೆ ತನ್ನ ಹೆಂಡತಿ ಸುಪ್ರಿಯಾರನ್ನ ನಾಮಿನಿ ಮಾಡಿದ್ದರು.
ಭಾರತದ ಭೂಪ್ರದೇಶದಲ್ಲಿ ಶಂಕಿತ ಮರದ ಪೆಟ್ಟಿಗೆಗಳನ್ನು ಇರಿಸಿದ ಪಾಕಿಸ್ತಾನದ ಡ್ರೋನ್ಗಳು..!
ಈ ಹಿನ್ನೆಲೆ ಕೃಷ್ಣ ಪ್ರಸಾದ್ ಪತ್ನಿ ಸುಪ್ರಿಯಾ ಅನ್ಲೈನ್ ನಲ್ಲಿ ಡೆತ್ ಕ್ಲೈಮ್ ಮಾಡಿದ್ದರು. ಇನ್ಸ್ಯೂರೆನ್ಸ್ ಕಂಪನಿಯೂ ಮೂರು ಕೋಟಿ ರೂಪಾಯಿ ಹಣವನ್ನ ಸುಪ್ರಿಯಾ ಖಾತೆಗೆ ವರ್ಗಾವಣೆ ಮಾಡಿತ್ತು. ಈ ಮಧ್ಯೆ ಬೆಳಕಿಗೆ ಬಂದ ವಿಷಯವೆಂದರೆ ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುಪ್ರಿಯಾ ದಾಖಲೆ ಸಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಮೃತಪಟ್ಟಿದ್ದು ಕ್ಯಾನ್ಸರ್ ನಿಂದ. ಪಾಲಿಸಿ ಪಡೆದುಕೊಂಡಾಗಲೂ ಕ್ಯಾನ್ಸರ್ ಇಲ್ಲವೆಂದು ಕೃಷ್ಣಪ್ರಸಾದ್ ಮೆನ್ಷನ್ ಮಾಡಿದ್ದರು. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗಲ್ಲ. ಹೇಗೊ ಸುಪ್ರಿಯಾ ನಕಲಿ ದಾಖಲೆ ನೀಡಿ ವಿಮೆ ಕ್ಲೈಮ್ ಮಾಡಿರುವುದು ಪತ್ತೆಯಾಗಿದೆ.
ವಿಮಾ ಕಂಪನಿ ಕಾನೂನು ವಿಭಾಗ ವ್ಯವಸ್ಥಾಪಕ ಪಿ.ಎಸ್. ಗಣಪತಿ ಎಂಬುವವರು ನೀಡಿದ ದೂರಿನ ಮೇರೆಗೆ ಕೋರಮಂಗಲ ಠಾಣೆ ಪೊಲೀಸರು, ವಿಟ್ಟಸಂದ್ರ ನಿವಾಸಿ ಸುಪ್ರಿಯಾ ಲಕಾಕುಲಾ ಎಂಬುವವರ ವಿರುದ್ಧ ಎಫ್‌ಐಆರ್(FIR) ದಾಖಲಿಸಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ಸುಪ್ರಿಯಾ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅವರನ್ನು ಹುಡುಕಲು ಆರೋಪಿಯ ಭಾವಚಿತ್ರವು ಸಹ ಇಲ್ಲದೆ ಪೊಲೀಸರು ಪರದಾಡುತ್ತಿದ್ದಾರೆ.