ಹರಿಯಾಣದ ಅಂಬಾಲಾದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಯ್ರ ತೋರಿದ್ದು ಮಹಿಳೆ ತರಕಾರಿ ಗಾಡಿಯಲ್ಲೇ ಮಗುವಿಗೆ ಜನ್ಮ ನೀಡಿರುವ ಅಮಾನವೀಯ ಘಟನೆ ನಡೆದಿದೆ.
ಪತ್ನಿಯನ್ನು ತರಕಾರಿ ಗಾಡಿಯಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದ ಪತಿ ಆಕೆಯನ್ನು ಹೆರಿಗೆಗೆ ದಾಖಲಿಸಿಕೊಳ್ಳುವಂತೆ ಸಿಬ್ಬಂದಿ ಬಳಿ ಪರಿಪರಿಯಾಗಿ ಮನವಿ ಮಾಡಿದ್ದಾರೆ. ಆದರೆ ವೈದ್ಯರು ಗಮನ ಹರಿಸಲೇ ಇಲ್ಲ ಎಂಬ ಆರೋಪ ಕೇಳಿಬಂದಿದೆ.
ಪಂಜಾಬ್‌ನ ಮೊಹಾಲಿ ಜಿಲ್ಲೆಯ ದಪ್ಪರ್‌ನ ನಿವಾಸಿಯಾಗಿರುವ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಕೆಯ ಹೆರಿಗೆ ಮಾಡಿಸುವಂತೆ ವೈದ್ಯರಲ್ಲಿ ಮನವಿ ಮಾಡಿದರೂ ಯಾರೊಬ್ಬರೂ ಗರ್ಭಿಣಿಯ ನೆರವಿಗೆ ಸ್ಟ್ರೆಚರ್ ತರಲು ಕೂಡ ಸಿದ್ಧರಿಲ್ಲ ಎಂದು ತಿಳಿದುಬಂದಿದೆ. ಇಳಿಸಂಜೆಯ ಚಳಿಯಲ್ಲೇ ಮಹಿಳೆ ತರಕಾರಿ ಗಾಡಿಯಲ್ಲೇ ಆಸ್ಪತ್ರೆ ಹೊರಗಡೆಯೇ ಮಗುವಿಗೆ ಜನ್ಮ ನೀಡಿದ್ದರು.
ಘಟನೆ ಬಳಿಕ ಮಾತನಾಡಿದ ಮಹಿಳೆ ಪತಿ, “ನಾನು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ದೇವರಂತೆ ಪರಿಗಣಿಸಿದ್ದೇ. ಆದರೆ ಘಟನೆಗಳ ನಂತರ, ಈ ಆಸ್ಪತ್ರೆಯ ಸಿಬ್ಬಂದಿಯಲ್ಲಿ ನಾನು ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ” ಎಂದು ಬೇಸರ ಹೊರಹಾಕಿದರು.
ಈ ಅಮಾನವೀಯ ಘಟನೆ ಸುದ್ದಿಯಾಗ್ತಿದ್ದಂತೆ ತಾಯಿ ಮತ್ತು ಮಗುವನ್ನು ಅಂತಿಮವಾಗಿ ಆಸ್ಪತ್ರೆಯೊಳಗೆ ಕರೆದೊಯ್ದು ವಾರ್ಡ್‌ಗೆ ಸೇರಿಸಲಾಯಿತು. ಈ ಬಗ್ಗೆ ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೂ ವರದಿ ಮಾಡಲಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದೇವೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.