ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮೇರಿಲೊ ಸರ್ಕಿಸಿಯನ್ ಔಷಧಿ ಏಜೆಂಟ್ ಆಗಿದ್ದಳು. ಆಕೆ ಪ್ರೀತಿಸುತ್ತಿದ್ದ ಯುವಕ ಸೆಣಬು ಬೆಳೆದು ಮಾರಾಟ ಮಾಡ್ತಿದ್ದ. ಆಗಾಗ ಹಣಕ್ಕೆ ಪೀಡಿಸ್ತಿದ್ದ ಬಾಯ್ ಫ್ರೆಂಡ್, ಆಕೆ ಮೇಲೆ ಹಲ್ಲೆ ಕೂಡ ನಡೆಸಿದ್ದ.
ಮೇರಿಲೊ, ಆಗಸ್ಟ್ 2016 ರಲ್ಲಿ ಮೊದಲ ಬಾರಿ ಪ್ರೇಮಿ ವಿರುದ್ಧ ದೂರು ನೀಡಿದ್ದಳು. ಆಗಸ್ಟ್ 28ರಂದು 911 ಗೆ ಕರೆ ಮಾಡಿ, ಹತ್ಯೆ ಯತ್ನದ ದೂರು ನೀಡಿದ್ದಳು. ಬಾತ್ ರೂಮಿನಲ್ಲಿ ಬಾಯ್ ಫ್ರೆಂಡ್ ಹಲ್ಲೆ ನಡೆಸಿದ್ದಾನೆ ಎಂದಿದ್ದಳು. ಆಕೆ ಕುಟುಂಬಸ್ಥರು ಹಾಗೂ ಸ್ನೇಹಿತರಿಗೂ ಆತನಿಂದ ಅಪಾಯವಿದೆ ಎಂಬ ಸಂಗತಿ ಗೊತ್ತಿತ್ತು. ಈ ಮಧ್ಯೆ ಡಿಸೆಂಬರ್ 1 ರಂದು, ಮೇರಿಲೋ, ಮನೆಗೆ ಸಿಸಿ ಟಿವಿ ಅಳವಡಿಸಿದ್ದಳು. ಬಾಯ್ ಫ್ರೆಂಡ್ ಹಲ್ಲೆಗೆ ಸಾಕ್ಷಿ ಪಡೆಯುವುದು ಆಕೆ ಉದ್ದೇಶವಾಗಿತ್ತು. ಆದ್ರೆ ಆಕೆ ಸಾವು ಇದ್ರಲ್ಲಿ ದಾಖಲಾಗಿದ್ದು ಮಾತ್ರ ವಿಪರ್ಯಾಸ. ಸಿಸಿ ಟಿವಿ ಹಾಕಿದ ದಿನವೇ ಮೇರಿಲೊ ಸಾವನ್ನಪ್ಪಿದ್ದಳು.
ರಾತ್ರಿ ನಾಯಿ ಜೊತೆ ಮನೆಯಲ್ಲಿದ್ದ ಆಕೆ ಹೊರ ಬರುವುದನ್ನು ಬಾಯ್ ಫ್ರೆಂಡ್ ಕಾಯ್ತಿದ್ದ. ನಾಯಿ ಬಿಡಲು ಮೇರಿಲೊ ಹೊರಗೆ ಬಂದಾಗ, ಬಾಯ್ ಫ್ರೆಂಡ್ ಮನೆಯೊಳಗೆ ನುಗ್ಗಿದ್ದ. ನಂತ್ರ ಹಲ್ಲೆ ನಡೆಸಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದ. ಕೊಲೆ ನಂತ್ರ ಸ್ವಲ್ಪವೂ ಪಶ್ಚಾತಾಪ ಪಡದ ವ್ಯಕ್ತಿ ಅಲ್ಲಿಂದ ಓಡಿ ಹೋಗಿ ತಲೆ ಮರೆಸಿಕೊಂಡಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಸಂಪೂರ್ಣ ವಿಚಾರಣೆ ನಂತ್ರ ಕೋರ್ಟ್, ಮರಣದಂಡನೆ ಶಿಕ್ಷೆ ವಿಧಿಸಿದೆ.