ತನ್ನ ಮಗುವಿನ ಮುಂದೆ ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದಕ್ಕಾಗಿ ಕೇರಳದ ಚೆರ್ಪುಳಸ್ಸೆರಿಯ ಮಹಿಳೆಗೆ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಮಂಜೇರಿ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಎ ಎಂ ಅಶ್ರಫ್ ಅವರು ನೀಡಿದ ತೀರ್ಪಿನಲ್ಲಿ ಮಗುವಿನ ಪರ ದೂರುದಾರರಿಗೆ ದಂಡವನ್ನು ಪಾವತಿಸುವಂತೆ ಸೂಚಿಸಲಾಗಿದೆ.
ಫೆಬ್ರವರಿ 15, 2019 ರಂದು ಮಹಿಳೆ ಕೊಂಡೊಟ್ಟಿಯಲ್ಲಿರುವ ತನ್ನ ಗಂಡನ ಮನೆಯಿಂದ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ತನ್ನ ಮಗುವಿನೊಂದಿಗೆ ಹೊರಗಡೆ ಹೋದಾಗ ಈ ಘಟನೆ ಸಂಭವಿಸಿದೆ. ದೇವಸ್ಥಾನಕ್ಕೆ ಹೋಗುವ ಬದಲಾಗಿ ಮಹಿಳೆ ರೈಲಿನಲ್ಲಿ ಎರ್ನಾಕುಲಂಗೆ ಪ್ರಯಾಣಿಸಿದಳು. ಅಲ್ಲಿ ಒಡಿಶಾ ಮೂಲದ ವ್ಯಕ್ತಿಯನ್ನು ಭೇಟಿಯಾಗಿ ಸಂಜೆ 7 ಗಂಟೆಗೆ ಉತ್ತರ ರೈಲ್ವೆ ನಿಲ್ದಾಣದ ಬಳಿಯ ಲಾಡ್ಜ್ ನಲ್ಲಿ ಇಬ್ಬರು ರೂಂ ತೆಗೆದುಕೊಂಡು ಮಗುವಿನ ಎದುರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು.
ಫೆಬ್ರವರಿ 17 ರಂದು ಮಹಿಳೆ ಮಗುವನ್ನು ಫೆರೋಕ್ ರೈಲು ನಿಲ್ದಾಣದಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾಳೆ. ಬಳಿಕ ಮಗು ತನ್ನ ಅಜ್ಜನ ಮೂಲಕ ಚೈಲ್ಡ್ ಲೈನ್‌ಗೆ ಮಾಹಿತಿ ನೀಡಿದೆ. ಚೈಲ್ಡ್ ಲೈನ್ ಅಧಿಕಾರಿಗಳ ಸೂಚನೆ ಮೇರೆಗೆ ಮಗುವನ್ನು ವೆಲ್ಲಿಮಡುಕುನ್ನು ರಕ್ಷಣಾ ಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಪೊಲೀಸರು ಮಗುವಿನ ಹೇಳಿಕೆಯನ್ನು ಪಡೆದುಕೊಂಡಿದ್ದರು. ಪ್ರಕರಣದ ಸಹ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಕೊಂಡೊಟ್ಟಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿ ವಿಮಲ್ ಮತ್ತು ಇನ್ಸ್ ಪೆಕ್ಟರ್ ವಿನೋದ್ ವಲಿಯತ್ತೂರ್ ಅವರು ತನಿಖೆ ನಡೆಸಿದ್ದು, ವಿಶೇಷ ಸರಕಾರಿ ಅಭಿಯೋಜಕ ಸೋಮಸುಂದರನ್ ಅವರು ಪ್ರಾಸಿಕ್ಯೂಷನ್ ಪರವಾಗಿ ವಾದ ಮಂಡಿಸಿದ್ದರು.