ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳದ ಪ್ರಕರಣದಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ನಿತ್ಯ ಒಂದರಂತೆ ನಡೆಯುತ್ತಿರುತ್ತವೆ. ಆದರೆ, ಬಹಿರಂಗವಾಗುವುದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಸಮಾಜದ ಅಪವಾದ, ಹಳೆ ಕಾಲದ ಮನಸ್ಥಿತಿಗೆ ಕಟ್ಟುಬಿದ್ದು ಹಲವು ಹೆಣ್ಣುಮಕ್ಕಳು ಮತ್ತು ಆಕೆಯ ಕುಟುಂಬಸ್ಥರು ದೌರ್ಜನ್ಯವನ್ನು ಮುಚ್ಚಿಹಾಕಿಬಿಡುತ್ತಾರೆ. ಸಂತ್ರಸ್ತೆಗೂ ಕೂಡ ನೋವು ನುಂಗಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಇಂತಹದ್ದೇ ಒಂದು ಪೈಶಾಚಿಕ ಪ್ರಕರಣ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
32 ವರ್ಷದ ಮಹಿಳೆಯನ್ನು ಆಕೆಯ ಪತಿ ಜತೆ ಸೇರಿ ಆತನ ಸ್ನೇಹಿತರು ಸಿಗರೇಟ್‌ಗಳಿಂದ ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದಾರೆ. ಬಳಿಕ ಎಲ್ಲರೂ ಸೇರಿ ಸಾಮೂಹಿಕ ಅತ್ಯಾಚಾರ ಕೂಡ ನಡೆಸಿದ್ದಾರೆ. ಖಾಸಗಿ ಅಂಗಾಂಗಗಳ ಮೇಲೆ ಪಾಪಿಗಳು ಸಿಗರೇಟಿನಿಂದ ಸುಟ್ಟಿರುವ ಗಾಯಗಳನ್ನು ಕಂಡು ಚಿಕಿತ್ಸೆ ನೀಡಿದ ವೈದ್ಯರೇ ತೀವ್ರ ಗಾಬರಿಗೊಂಡಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಈ ದುರ್ಘಟನೆ ನಡೆದಿದೆ.
ಮ್ಯಾಟ್ರಿಮೊನಿ ವೆಬ್‌ಸೈಟ್ ಮೂಲಕ ಪರಿಚಯವಾಗಿದ್ದವನನ್ನು ಮಹಿಳೆಯು ವರಿಸಿದ್ದಳು. ಆದರೆ, ಆತನಿಗೆ ಮುಂಚೆಯೇ ಮತ್ತೊಂದು ವಿವಾಹವಾಗಿದ್ದು ತಡವಾಗಿ ತಿಳಿಯಿತು. ಜತೆಗೆ ಆತನೊಬ್ಬ ವಿಕೃತ ಕಾಮಿ ಎಂದು ಕೂಡ ಗೊತ್ತಾಯಿತು. 2019ರ ನವೆಂಬರ್‌ನಿಂದ ನಿತ್ಯ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಹಿಳೆಯು ಪತಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಅತ್ಯಾಚಾರದ ಬಳಿಕ ಹೇಗೋ ಫಾರ್ಮ್ ಹೌಸ್‌ನಿಂದ ತಪ್ಪಿಸಿಕೊಂಡು ಛತ್ತೀಸ್‌ಗಢದಲ್ಲಿನ ಪೋಷಕರ ಮನೆ ಸೇರಿದೆ. ನಂತರ ಪೊಲೀಸ್ ಠಾಣೆಗೆ ತೆರಳಿ ವಿವರವಾದ ದೂರು ನೀಡಿದೆ ಎಂದು ಮಹಿಳೆ ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳೀಸಿದ್ದಾರೆ.