ಚಿಕ್ಕಬಳ್ಳಾಪುರ: ಪತಿ ಕಳೆದುಕೊಂಡಿದ್ದ ಮಹಿಳೆಯೊಬ್ಬರು, ಯುವಕರನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ದೋಚಿ ವಂಚಿಸಿತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರದ ಸಿಇಎನ್ ಠಾಣೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಕೋಮಲಾ ಬಂಧಿತ ಮಹಿಳೆ. 7 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಕೋಮಲಾ ಐಷಾರಾಮಿ ಜೀವನಕ್ಕಾಗಿ ಯುವಕರನ್ನು ಯಾಮಾರಿಸಿ ಹಣ ದೋಚುತ್ತಿದ್ದಳು. ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಯುವಕರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪಡೆದು ಎಸ್ಕೇಪ್ ಆಗುತ್ತಿದ್ದಳು. ಇದೀಗ ಚಿಕ್ಕಬಳ್ಳಾಪುರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ರಾಘವೇಂದ್ರ ಎಂಬುವವರಿಗೆ ಮಹಿಳೆ ಕೋಮಲಾ ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಯವಾಗಿ, ವಿವಾಹವಾಗುವುದಾಗಿ ನಂಬಿಸಿ 7.40 ಲಕ್ಷ ಹಣ ಪಡೆದು ಮೋಸ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಚಿಕ್ಕಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಹಿಳೆ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಆಕೆ ಇದೇ ರೀತಿ ಹಲವರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಗುಜರಾತ್ ನಲ್ಲಿರುವ ಕುಂದಾಪುರ ನಿವಾಸಿಯೊಬ್ಬರಿಗೂ ಮಹಿಳೆ ಇದೇ ರೀತಿ ಮೋಸ ಮಾಡಿದ್ದಾಳೆ. ಬೆಂಗಳೂರಿನ ನಾಗರಾಜ್ ಎಂಬುವವರ ಬಳಿ 1.50 ಲಕ್ಷ ಹಣ ಪಡೆದು ವಂಚಿಸಿದ್ದಾಳೆ. ಕೆಪಿಟಿಸಿಎಲ್ ನೌಕರನಾಗಿದ್ದ ಕೋಮಲಾ ಪತಿ 2017ರಲ್ಲಿ ಸಾವನ್ನಪ್ಪಿದ್ದರು. ಪತಿ ಸಾವನ್ನಪ್ಪಿರುವುದರಿಂದ 6 ಕೋಟಿ ಪರಿಹಾರದ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿ ಮಹಿಳೆ ಹಣ ವಸೂಲಿ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.