ಗದಗ: ಏಕಾಏಕಿ ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ 60 ಅಡಿ ಆಳದ ಪಾಳುಬಾವಿಯಲ್ಲಿ ಪತ್ತೆಯಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ನಡೆದಿದೆ.
ಪಾರ್ವತಿ ಕಲ್ಮಠ ಎಂಬ ಮಹಿಳೆ ಮೂರು ದಿನಗಳ ಹಿಂದೆ ಕಾಣೆಯಾಗಿದ್ದರು. ನಾಪತ್ತೆ ಪ್ರಕರಣ ಕೂದ ದಾಖಲಾಗಿತ್ತು. ಇದೀಗ ತೋಟಗುಂಟಿ ಗ್ರಾಮದಿಂದ ಸುಮಾರು ಒಂದುವರೆ ಕಿ.ಮೀ ದೂರದ ಜಮೀನಿನಲ್ಲಿರುವ ಪಾಳುಬಾವಿಯಲ್ಲಿ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದಾರೆ.
ಮೂರು ದಿನಗಳ ಹಿಂದೆ ಮಹಿಳೆ ಮುಂಜಾನೆ 5 ಗಂಟೆಗೆ ಮನೆಯಿಂದ ಹೊರ ಬಂದು ಕೆಲಸಕ್ಕೆಂದು ಹೋಗುತ್ತಿದ್ದರು. ಈ ವೇಳೆ ಅಪರಿಚಿತ ಮಹಿಳೆಯೊಬ್ಬಳು ನೀನು ನನಗೆ ಬೇಕು. ನಿನ್ನ ಮಾಂಗಲ್ಯ ಸರ, ಕೈ ಬಳೆ, ಕಾಲುಂಗುರ ಬೇಕು ಎಂದು ಒತ್ತಾಯಿಸಿದ್ದಾಳಂತೆ. ಅಪರಿಚ ಮಹಿಳೆಯ ವರ್ತನೆಗೆ ಗಾಬರಿಯಾದ ಪಾರ್ವತಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ, ಬಳೆ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಅಪರಿಚಿತ ಮಹಿಳೆ ಕೈಹಿಡಿದು ಎಳೆದೊಯ್ದು ಜಮೀನಿನಲ್ಲಿರುವ ಪಾಳುಬಾವಿಗೆ ತಳ್ಳಿದ್ದಾಳೆ. ಬಾವಿಗೆ ಬಿದ್ದ ಬಳಿಕ ಏನಾಯಿತು ಎಂಬುದೂ ಗೊತ್ತಿಲ್ಲ. ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಪಾರ್ವತಿ ವಿವರಿಸಿದ್ದಾರೆ.
ಎರಡು ದಿನದ ಬಳಿಕ ಪ್ರಜ್ಞೆ ಬಂದಿದೆ. ಎಚ್ಚರವಾದಾಗ ಆಳವಾದ ನೀರಿಲ್ಲದ ಬಾವಿಯಲ್ಲಿರುವುದು ಗೊತ್ತಾಗಿದೆ. ಎಷ್ಟೇ ಕೂಗಿಕೊಂಡರೂ ಯಾರಿಗೂ ಕೇಳಿಲ್ಲ. ಮೂರನೇ ದಿನ ಜಮೀನಿನ ಕೆಲಸಕ್ಕೆ ಹೋಗುವವರು ಕೂಗಾಟ ಕೇಳಿ ರಕ್ಷಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಬಾವಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನರೇಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ