
ಭಯಂಕರ ಹಾವುಗಳನ್ನ ರಕ್ಷಣೆ ಮಾಡುವಾಗ ಮುನ್ನೆಚ್ಚರಿಕೆಗಳೊಂದಿಗೆ ಅಸಡ್ಡೆ ತೋರಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ದೂಷಣೆಗೆ ಒಳಗಾದ ಹಲವಾರು ಪ್ರಕರಣಗಳಿವೆ.
ಆದ್ರೆ, ಕೇರಳದ ತಿರುವನಂತಪುರಂ ಜಿಲ್ಲೆಯ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಹಾವನ್ನು ರಕ್ಷಿಸುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರೋಶನಿ ಜಿ ಎಸ್ ಎನ್ನುವ ಅರಣ್ಯ ಅಧಿಕಾರಿಯು ಭಯಾನಕ ವಿಷಪೂರಿತ ಹಾವನ್ನು ಶಾಂತತೆಯಿಂದ ಮತ್ತು ಸರುಕ್ಷಿತವಾಗಿ ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.
45 ಸೆಕೆಂಡುಗಳ ಇರುವ ಈ ವಿಡಿಯೋ ರೋಶನಿ ಅವರು ಹಾವಿನ ಬಾಲ ಹಿಡಿದುಕೊಂಡಿರುವುದರಿಂದ ಶುರುವಾಗುತ್ತದೆ. ಕಟ್ಟಡದ ಗೋಡೆಯ ಬಳಿಯಿದ್ದ ಹಾವನ್ನ, ನೆಲದ ಮೇಲೆ ಇರಿಸಿದ್ದ ಹಾವು ಹಿಡಿಯುವ ಸಾಧನದ ಮೂಲಕ ಚೀಲದೊಳಗೆ ಬಿಡಲು ಸಿದ್ಧವಾಗುತ್ತಾರೆ. ಹಾವು ಚೀಲದೊಳಗೆ ನುಸುಳುತ್ತಿದ್ದಂತೆ, ಅರಣ್ಯಾಧಿಕಾರಿಯು ಆ ಸಾಧನವನ್ನು ಬಳಸಿ ಒಳಗೆ ತಳ್ಳುತ್ತಾರೆ. ನಂತರ ರೋಶನಿಯವರು, ಆ ಚೀಲವನ್ನು ಕಟ್ಟಿ ಮನುಷ್ಯರಿಂದ ಹಾವನ್ನು, ಹಾವಿನಿಂದ ಮನುಷ್ಯರನ್ನು ರಕ್ಷಣೆ ಮಾಡಿದ್ದಾರೆ.
ಇನ್ನೂ ಘಟನೆಯ ವಿಡಿಯೋವನ್ನ ಫೆಬ್ರವರಿ 2 ರಂದು ಪತ್ರಕರ್ತೆ ಜಿಶಾ ಸೂರ್ಯ ಹಂಚಿಕೊಂಡಿದ್ದಾರೆ. ನಂತರ ಅದನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಧಾ ರಾಮೆನ್ ಮರು-ಹಂಚಿಕೊಂಡಿದ್ದು, ಇಲ್ಲಿಯವರೆಗೆ 45,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.