ಚೆನ್ನೈ: ಖಾಸಗಿ ಫರ್ಟಿಲಿಟಿ ಕ್ಲಿನಿಕ್ ಗೆ ಅಪ್ರಾಪ್ತ ಬಾಲಕಿಯ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ 16 ವರ್ಷದ ಬಾಲಕಿಯ ತಾಯಿ ಸೇರಿದಂತೆ ಮೂವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಈರೋಡ್ ನಲ್ಲಿರುವ ತನ್ನ ಮನೆಯಿಂದ ಬಾಲಕಿ ಓಡಿಹೋಗಿ ಸೇಲಂನಲ್ಲಿರುವ ಸಂಬಂಧಿಕರ ಸ್ಥಳದಲ್ಲಿ ಆಶ್ರಯ ಪಡೆದ ನಂತರ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರ ಸಹಾಯದಿಂದ ಪೊಲೀಸ್ ದೂರು ದಾಖಲಿಸಲಾಗಿದೆ.
ಬಂಧಿತರಾದ ಇಂದಿರಾನಿ ಅಲಿಯಾಸ್ ಸುಮಯ್ಯ(33), ಸೈಯದ್ ಅಲಿ(40) ಮತ್ತು ಮಾಲತಿ(30) ಅವರನ್ನು ಜೈಲಿಗೆ ಕಳುಹಿಸಲಾಗಿದೆ.
ಇಂದಿರಾನಿ ಅಲಿಯಾಸ್ ಸುಮಯ್ಯ ಸೈಯದ್ ಅಲಿಯನ್ನು ಎರಡನೇ ವಿವಾಹವಾಗಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕಿ ಇಂದ್ರಾಣಿಯ ಮೊದಲ ಪತಿಯ ಮಗಳು. ಅಪ್ರಾಪ್ತ ಮಗಳಿಗೆ ಅಂಡಾಣುಗಳನ್ನು ದಾನ ಮಾಡಲು ಒತ್ತಾಯಿಸಲಾಗಿತ್ತು. ಆಕೆಯ ಮಲತಂದೆ ಸೈಯದ್ ಅಲಿ ಹಲವಾರು ಸಂದರ್ಭಗಳಲ್ಲಿ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈರೋಡ್ ದಕ್ಷಿಣ ಪೊಲೀಸ್ ಇನ್ಸ್ ಪೆಕ್ಟರ್ ಪಿ. ವಿಜಯಾ ಮಾತನಾಡಿ, ಬಂಧಿತ ಆರೋಪಿಗಳು 8 ಬಾರಿ ಅಪ್ರಾಪ್ತ ಬಾಲಕಿಯ ಅಂಡಾಣು ದಾನಕ್ಕೆ ಬಲವಂತ ಮಾಡಿದ್ದರು. ಪ್ರತಿ ಅಂಡಾಣು ದಾನದಿಂದ ಸುಮಯ್ಯ 20,000 ರೂ. ಮತ್ತು ಮಾಲತಿ 5,000 ರೂ. ಕಮಿಷನ್ ಪಡೆದಿದ್ದಾರೆ ಎಂದು ಹೇಳಿದರು.