ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ 30 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ಆಸ್ಪತ್ರೆಯು ದಾಖಲಾತಿ ನಿರಾಕರಿಸಿದ ಕಾರಣಕ್ಕೆ ರಸ್ತೆಯಲ್ಲೇ ಆಕೆ ಹೆರಿಗೆ ಮಾಡಿಸಿಕೊಳ್ಳಬೇಕಾಯಿತು.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವು ನರ್ಸ್ ಸೇರಿದಂತೆ ಮಹಿಳೆಯರು, ಗರ್ಭಿಣಿಯ ಸುತ್ತಲೂ ಸೀರೆ ಹಿಡಿದು ನಿಂತಿದ್ದಾರೆ.
ಇದೇ ವೇಳೆ ಸೋಮವಾರ ಆಸ್ಪತ್ರೆಯವರು ಆಕೆಯನ್ನು ದಾಖಲಿಸಿಕೊಳ್ಳಲಿಲ್ಲ ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದು, ಆಕೆ, ರಾತ್ರಿಯನ್ನು ತುರ್ತು ವಿಭಾಗದ ಹೊರಗೆ ಕಳೆಯಬೇಕಾಯಿತು. ನೋವಿನಿಂದ ಒದ್ದಾಡಿದರೂ ಆಸ್ಪತ್ರೆಗೆ ಸೇರಿಸಿಕೊಳ್ಳಲಿಲ್ಲ ಎಂದು ಟೀಕಿಸಿದ್ದಾರೆ.
ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಮತ್ತು ಆಸ್ಪತ್ರೆಯ ಆವರಣದಲ್ಲಿಯೇ ಅವಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸ್ ಉಪ ಆಯುಕ್ತರು ಸಹ ತಿಳಿಸಿದ್ದಾರೆ. ಇದೀಗ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಮಧ್ಯೆ ಘಟನೆಯ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಪ್ರಾಥಮಿಕ ವರದಿ ಶೀಘ್ರದಲ್ಲೇ ಸಲ್ಲಿಕೆಯಾಗಲಿದೆ. ದೆಹಲಿ ಮಹಿಳಾ ಆಯೋಗ ಕೂಡ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದು, ಜುಲೈ25 ರೊಳಗೆ ಈ ಬಗ್ಗೆ ಕೈಗೊಂಡ ಕ್ರಮದ ವರದಿಯನ್ನು ಕೋರಿದೆ.