ಹೌದು, ಯುವತಿಯೊಬ್ಬಳು ಆಟೋ ಚಾಲಕರೊಬ್ಬರಿಗೆ 23,400 ರೂ. ವಂಚಿಸಿದ್ದಾಳೆ. ಆಟೋರಿಕ್ಷಾ ಚಾಲಕ 58 ವರ್ಷದ ಶಿವಕುಮಾರ್ ವಿ.ಹೆಚ್ ಎಂಬುವವರಿಗೆ ಸ್ನೇಹಿತನೊಬ್ಬ ಹಣ ನೀಡಬೇಕಿತ್ತು. ಬೆಳಗ್ಗೆ ತನ್ನ ಸ್ನೇಹಿತ ಇರುವ ಸ್ಥಳದತ್ತ ಶಿವಕುಮಾರ್ ತೆರಳುತ್ತಿದ್ದರು. ಬೆಳಿಗ್ಗೆ 9.45 ರ ಸುಮಾರಿಗೆ ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಸ್ನೇಹಿತನಲ್ಲಿ ಹಣ ನೀಡುವಂತೆ ಹೇಳಿದ್ದರಂತೆ.
ಈ ವೇಳೆ ಯುವತಿಯೊಬ್ಬರು ಬಂದು ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಡ್ರಾಪ್ ಕೇಳಿದ್ದಾರೆ. ಹೇಗೂ ತಾನು ಆ ಕಡೆ ಹೋಗಬೇಕಿತ್ತಲ್ವಾ ಎಂದು ಅಂದುಕೊಂಡ ಶಿವಕುಮಾರ್ ಆಕೆಯನ್ನು ಆಟೋಗೆ ಹತ್ತಿಸಿದ್ದಾರೆ. ಈ ವೇಳೆ ಶಿವಕುಮಾರ್ ತನ್ನ ಸ್ನೇಹಿತನ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿರುವುದನ್ನು ಯುವತಿ ಕೇಳಿಸಿಕೊಂಡಿದ್ದಾಳೆ.
ಕಾಲೇಜು ಬಳಿ ಇಳಿಯುವಾಗ ಆಟೋ ಚಾಲಕ ಶಿವಕುಮಾರ್ ಗೆ ಸ್ನೇಹಿತ ಹಣ ನೀಡಿದ್ದಾನೆ. ಇದನ್ನು ನೋಡಿದ ಯುವತಿ ತನ್ನ ಕಾಲೇಜು ಫೀಸ್ ಕಟ್ಟಲು ಹಣ ಬೇಕು, ನಿಮ್ಮ ಬಳಿ ಇರುವ ನಗದನ್ನು ಕೊಟ್ರೆ ತಾನು ಫೋನ್ ಪೇ ಮಾಡುವುದಾಗಿ ಹೇಳಿದ್ದಾಳೆ. ಮೊದಲಿಗೆ ಒಪ್ಪದಿದ್ರೂ, ಆಕೆ ಪರಿ ಪರಿಯಾಗಿ ಕೇಳಿಕೊಂಡಿದ್ರಿಂದ ಒಪ್ಪಿಕೊಂಡ ಶಿವಕುಮಾರ್, ಹಣ ನೀಡಿದ್ದಾರೆ. ಆದ್ರೆ, ಆಕೆ ಫೋನ್ ಪೇ ಮಾಡದಿದ್ದಾಗ ತನಗಿನ್ನೂ ಮೆಸೇಜ್ ಬಂದಿಲ್ಲ ಎಂದು ಆಕೆಗೆ ಹೇಳಿದ್ದಾರೆ.
ಈ ವೇಳೆ ಆಕೆ, ಏನೋ ಸಮಸ್ಯೆಯಾಗಿದೆ. ಕಾಲೇಜು ಫೀಸ್ ಕಟ್ಟಲು ಇವತ್ತೇ ಕೊನೆ ದಿನ. ತುರ್ತಾಗಿ ಬೇಕಿತ್ತು. ಫೀಸ್ ಕಟ್ಟಿ ಬಂದು ನಿಮ್ಮ ಹಣ ಕೊಡುತ್ತೇನೆ ಎಂದು ಹೇಳಿದ್ದಾಳೆ. ಆದರೂ ಶಿವಕುಮಾರ್ ತಮ್ಮ ಮೊಬೈಲ್ ನಲ್ಲಿ ಆಕೆಯ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆದರೆ, ಕಾಲೇಜು ಆವರಣದೊಳಗೆ ಹೋದ ಯುವತಿ ಮತ್ತೆ ಹಿಂತಿರುಗಿಲ್ಲ. ಹೀಗಾಗಿ ತಾನು ಮೋಸ ಹೋದೆ ಎಂದು ಅರಿತ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.