ಮುಂಬೈ: ತಾಯಿಯೊಬ್ಬಳು ಚಿರತೆಯೊಂದಿಗೆ ಹೋರಾಡಿ ತನ್ನ ಮೂರು ವರ್ಷದ ಮಗಳನ್ನು ರಕ್ಷಿಸಿದ ಅಪರೂಪದ ಘಟನೆ ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆದಿದೆ.
ಮಗುವನ್ನು ರಕ್ಷಿಸಿದ ತಾಯಿಯೇ ಜ್ಯೋತಿ ಪೂಪಲ್ವಾರ್. ಈಕೆ ತನ್ನ ಮಗುವನ್ನು ಅಂಗಳದಲ್ಲಿ ಬಿಟ್ಟು ಸ್ನಾನಕ್ಕೆ ಹೋಗಿದ್ದರು. ಆಗ ಮಗು ಮನೆಯ ಅಂಗಳದಲ್ಲಿ ಕುಳಿತು ಊಟ ಮಾಡುತ್ತಿತ್ತು. ಆಗ ದಿಢೀರನೇ ಪ್ರತ್ಯಕ್ಷಗೊಂಡ ಚಿರತೆ ಮಗುವಿನ ಮೇಲೆ ದಾಳಿ ಮಾಡಿ ಕಚ್ಚಿ ಎಳೆದೊಯ್ದಿದೆ. ಇದನ್ನು ಕಂಡ ತಾಯಿ ತಕ್ಷಣವೇ ದೊಣ್ಣೆ ಹಿಡಿದುಕೊಂಡು ಬಂದು ಚಿರತೆಯ ಬಾಯಿಗೆ ಹೊಡೆದಿದ್ದಾರೆ. ಆಗ ಚಿರತೆ ಮಗುವನ್ನು ಬಿಟ್ಟು ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾನು ನನ್ನ ಮಗುವಿಗೆ ಊಟಕ್ಕೆ ಬಿಟ್ಟು ಸ್ನಾನಕ್ಕೆ ಹೋಗಿದ್ದೆ. ಆಗ ಚಿರತೆ ಬಂದು ಮಗುವನ್ನು ಎಳೆದುಕೊಂಡು ಹೋಗಿದೆ. ನಾನು ತಕ್ಷಣವೇ ದೊಣ್ಣೆಯಿಂದ ಸಾಕಷ್ಟು ಬಾರಿ ಹೊಡೆದೆ. ಅದು ಮಗುವನ್ನು ಬಿಟ್ಟು ಹೋಯಿತು. ನನ್ನ ಮೇಲೆ ದಾಳಿ ಮಾಡಲಿಲ್ಲ ಎಂದು ಸಂದರ್ಭ ವಿವರಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷತೆಗೆ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡ ಸ್ಥಳೀಯರು ಚಿರತೆ ಹತ್ಯೆಗೆ ಇಲಾಖೆ ಆದೇಶ ನೀಡಿದ ನಂತರ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ.