ಬೆಂಗಳೂರು: ಸರ್ಕಾರಿ ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಮಹಿಳಾ ನೌಕರರಿಗೆ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಶಿಶುಪಾಲನಾ ರಜೆ ತೆಗೆದುಕೊಳ್ಳುವ ಕುರಿತಾಗಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಈಗಿರುವ ರಜೆಗಳೊಂದಿಗೆ ಹೆಚ್ಚುವರಿಯಾಗಿ 180 ವೇತನ ಸಹಿತ ರಜೆ ಲಭ್ಯವಾಗಲಿದೆ.
ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ ಶಿಶುಪಾಲನಾ ರಜೆಯನ್ನು ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಬೇಕೆಂದು ತಿಳಿಸಲಾಗಿದೆ. ಕಿರಿಯ ಮಗುವಿಗೆ 18 ವರ್ಷ ತುಂಬುವವರೆಗೆ ರಜೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
2021 -22 ನೇ ಸಾಲಿನಲ್ಲಿ ಮಹಿಳಾ ನೌಕರರ ಶಿಶುಪಾಲನಾ ರಜೆಯನ್ನು ಆರು ತಿಂಗಳಿಗೆ ಹೆಚ್ಚಿಸುವ ಕುರಿತು ಘೋಷಣೆ ಮಾಡಲಾಗಿತ್ತು. ಅಂತೆಯೇ ಅಧಿಕೃತ ಆದೇಶ ಹೊರಡಿಸಲಾಗಿದೆ. ಮಹಿಳಾ ನೌಕರರು ಗರಿಷ್ಠ ಮಕ್ಕಳನ್ನು ಹೊಂದಿರುವುದನ್ನು ಪರಿಗಣಿಸದೆ ಅತ್ಯಂತ ಕಿರಿಯ ಮಗುವಿಗೆ 18 ವರ್ಷ ತುಂಬುವವರೆಗೆ ಶಿಶುಪಾಲನಾ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಪಡೆಯುವ ರಜೆಗೆ ವೇತನ ಕಡಿತ ಮಾಡುವಂತಿಲ್ಲ. ಪ್ರತಿಸಲವೂ ರಜೆ ಕನಿಷ್ಠ 15 ದಿನಕ್ಕಿಂತ ಕಡಿಮೆ ಇರದಂತೆ ನೀಡಬೇಕೆಂದು ತಿಳಿಸಲಾಗಿದೆ.