ಬಿರುಪಾ: ನದಿಯಲ್ಲಿ ಮೊಸಳೆಯೊಂದು ಮಹಿಳೆಯೊಬ್ಬರನ್ನು ಜೀವಂತವಾಗಿ ತಿಂದ ಆಘಾತಕಾರಿ ಘಟನೆ ಒಡಿಶಾದ ಜಾಜ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಪಲತ್‌ಪುರ್ ಗ್ರಾಮದಲ್ಲಿ 35 ವರ್ಷದ ಮಹಿಳೆಯು ಬಟ್ಟೆ ತೊಳೆದ ನಂತರ ಸ್ನಾನ ಮಾಡುತ್ತಿದ್ದರು. ಈ ವೇಳೆ ಮೊಸಳೆ ನದಿಯ ಆಳವಾದ ನೀರಿಗೆ ಮಹಿಳೆಯನ್ನು ಎಳೆದೊಯ್ದಿದೆ. ತನ್ನನ್ನು ಸರೀಸೃಪದ ದವಡೆಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ರೂ ಆಕೆಗೆ ಸಾಧ್ಯವಾಗಲಿಲ್ಲ.
ಮೊಸಳೆ ಮಹಿಳೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನದಿ ದಡದಲ್ಲಿದ್ದ ಸ್ಥಳೀಯರು ನೋಡಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ನದಿಯ ಇನ್ನೊಂದು ಬದಿಯಲ್ಲಿ ಮಹಿಳೆಯನ್ನು ಮೊಸಳೆ ತಿನ್ನುತ್ತಿರುವುದನ್ನು ಅವರು ಅಸಹಾಯಕತೆಯಿಂದ ನೋಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವರು ಈ ಭೀಕರ ದೃಶ್ಯದ ವಿಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಹಿಳೆಯ ಛಿದ್ರಗೊಂಡ ದೇಹ ಪತ್ತೆ
ಇನ್ನು ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಿಳೆಯ ದೇಹದ ಛಿದ್ರಗೊಂಡ ಭಾಗವನ್ನು ಹೊರತೆಗೆದಿದ್ದಾರೆ. ಮೊಸಳೆ ಮಹಿಳೆಯ ದೇಹದ ಬಹುತೇಕ ಭಾಗವನ್ನು ತಿಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಮೊಸಳೆಯನ್ನು ಹಿಡಿಯುವವರೆಗೆ ಜನರು ನದಿಯ ದಡಕ್ಕೆ ಹೋಗದಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಘಟನೆಯು ಆ ಪ್ರದೇಶದ ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಬಹುತೇಕರು ಇತರ ನೀರಿನ ಮೂಲಗಳಿಲ್ಲದೆ ನದಿಯನ್ನೇ ಅವಲಂಬಿಸಬೇಕಾಗಿದೆ.
ಒಡಿಶಾದಲ್ಲಿ ಮೂರು ತಿಂಗಳಲ್ಲಿ ಮೊಸಳೆಗಳು ಜನರನ್ನು ಕೊಂದಿರುವ ಐದನೇ ಘಟನೆ ಇದಾಗಿದೆ. ಜೂನ್-ಜುಲೈನಲ್ಲಿ ನೆರೆಯ ಕೇಂದ್ರಪಾರ ಜಿಲ್ಲೆಯಲ್ಲಿ ನಾಲ್ವರನ್ನು ಮೊಸಳೆಗಳು ಎಳೆದೊಯ್ದು ತಿಂದಿದ್ದವು.