ಗಾಜಿಯಾಬಾದ್: ಮಹಿಳಾ ಇ-ರಿಕ್ಷಾ ಚಾಲಕರೊಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಮಂಗಳವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಮಹಿಳೆ ಪದೇ ಪದೇ ಪೊಲೀಸರಿಗೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ತನಿಖೆಗಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೈರಲ್ ವಿಡಿಯೋದಲ್ಲಿ, ಮಹಿಳೆ ಪೊಲೀಸ್ ವಿರುದ್ಧ ಕಿರುಚಿದ್ದಲ್ಲದೆ, ತನ್ನ ಚಪ್ಪಲಿಯಿಂದ ಮನಬಂದಂತೆ ಥಳಿಸಿರುವುದು ಕಂಡುಬಂದಿದೆ.
ಟ್ರಾಫಿಕ್ ಜಾಮ್ ಮತ್ತು ಇತರ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವ ಕಾರಣಕ್ಕೆ ವಾಹನವನ್ನು ರಸ್ತೆಯಿಂದ ಸ್ಥಳಾಂತರಿಸುವಂತೆ ಪೊಲೀಸ್ ಅಧಿಕಾರಿ ಮಹಿಳಾ ರಿಕ್ಷಾ ಚಾಲಕಿಯಲ್ಲಿ ಕೇಳಿಕೊಂಡಿದ್ದಾರೆ. ಇದಕ್ಕೆ ಕೋಪಗೊಂಡ ಮಹಿಳೆ ಪೊಲೀಸ್ ವಿರುದ್ಧವೇ ತಿರುಗಿಬಿದ್ದಿದ್ದಾಳೆ.
ಈ ಪ್ರದೇಶದಲ್ಲಿ ಇ-ರಿಕ್ಷಾಗಳಿಂದಾಗಿ ಟ್ರಾಫಿಕ್ ಜಾಮ್ ಆಗುವ ಕುರಿತು ಹಲವಾರು ದೂರುಗಳನ್ನು ಸ್ವೀಕರಿಸಿದ್ದು, ಹೀಗಾಗಿ ಟ್ರಾಫಿಕ್ ಪೊಲೀಸ್ ಸ್ಥಳಕ್ಕಾಗಮಿಸಿ ಮಹಿಳೆ ಬಳಿ ತನ್ನ ಇ-ರಿಕ್ಷಾವನ್ನು ಸರಿಸುವಂತೆ ಹೇಳಿದ್ರು. ಆದರೆ, ಮಹಿಳೆ ಆತನೊಂದಿಗೆ ಅನುಚಿತವಾಗಿ ವರ್ತಿಸಿದ್ದಾಳೆ. ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದಳು ಅಂತಾ ಎಸಿಪಿ ಟ್ರಾಫಿಕ್ ಪೊಲೀಸ್ ಪೂನಂ ಮಿಶ್ರಾ ಹೇಳಿದ್ದಾರೆ.
ಇ-ರಿಕ್ಷಾದಲ್ಲಿ ನಂಬರ್ ಪ್ಲೇಟ್ ಹೊಂದಿರದ ಮಹಿಳೆಯ ವಿರುದ್ಧ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಥಳಿಸಿರುವ ಆರೋಪದಡಿ ಸಂಚಾರ ವಿಭಾಗದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ಸಂಚಾರ ಪೊಲೀಸರು ತಿಳಿಸಿದ್ದಾರೆ.