ಲಖನೌ: ಮಹಿಳೆಯೊಬ್ಬಳನ್ನು ಇಬ್ಬರು ಮಹಿಳಾ ಪೊಲೀಸರು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿ ಕ್ರಮಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಪೊಲೀಸರಿಬ್ಬರು ಮಹಿಳೆಯ ಕೈ ಹಿಡಿದು ನಡುರಸ್ತೆಯಲ್ಲಿ ನಿರ್ದಯರಾಗಿ ಧರ ಧರನೆ ಎಳೆದೊಯ್ದಿದ್ದಾರೆ.
ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದು, ಆಕೆಯ ಪತಿಯೊಂದಿಗೆ ಜಗಳ ಮಾಡಿಕೊಂಡಿದ್ದಳು. ಪತಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾಳೆ. ಈ ವೇಳೆ ಪೊಲೀಸ್ ಠಾಣೆಯ ಗೋಡೆ ಹತ್ತಲು ಆಕೆ ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಆಕೆಯನ್ನು ಪೊಲಿಸ್ ಠಾಣೆಯಿಂದ ಆಚೆ ಕಳುಹಿಸಲು ಯತ್ನಿಸಿದ್ದಾರೆ.
ಆದರೆ ಮಹಿಳೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದ್ದಳು. ಈ ವೇಳೆ ಮಹಿಳಾ ಪೊಲೀಸರಿಬ್ಬರೂ ಆಕೆಯ ಎರಡೂ ಕೈಗಳನ್ನು ಹಿಡಿದು ರಸ್ತೆಯಲ್ಲಿ ಧರ ಧರನೆ ಎಳೆದೊಯ್ದಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಗಳ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ದೋಯ್ ಎಸ್ ಪಿ ಕೇಶವ್ ಚಂದ್ರ, ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಹಿಳಾ ಸಿಬ್ಬಂದಿಗಳು ತಪ್ಪಿತಸ್ಥರೆಂದು ತಿಳಿದುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.