ಜೈಪುರ್: ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಆಂಬುಲೆನ್ಸ್ ಡೋರ್ ಜಖಂಗೊಂಡ ಕಾರಣ ವಾಹನದಲ್ಲಿಯೇ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಭಿಲ್ವಾರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಆಂಬುಲೆನ್ಸ್ ನಲ್ಲಿ ಭಿಲ್ವಾರ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ, ಡೋರ್ ತೆಗೆಯಲು ಸಾಧ್ಯವಾಗಿಲ್ಲ. ಡೋರ್ ಜಖಂಗೊಂಡಿದ್ದು, ತೆಗೆಯಲು ಸಾಧ್ಯವಾಗದ ಕಾರಣ ಆಕೆಯನ್ನು ಆಸ್ಪತ್ರೆಯ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲು 15 ನಿಮಿಷ ವಿಳಂಬವಾಗಿದೆ. ಕೊನೆಗೆ ಆಂಬುಲೆನ್ಸ್ ಕಿಟಕಿಯ ಗಾಜು ಒಡೆದು ತುರ್ತು ನಿಗಾ ಘಟಕಕ್ಕೆ ಮಹಿಳೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಆದರೆ ಈ ವೇಳೆಗಾಗಲೇ ಆಕೆ ಮೃತಪಟ್ಟಿದ್ದರು.
ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಇರಲಿಲ್ಲ. ಚಾಲಕ ಸುತ್ತು ಬಳಸಿ ಬಂದಿದ್ದರಿಂದ ಆಸ್ಪತ್ರೆಗೆ ತಲುಪುವುದು ವಿಳಂಬವಾಗಿದೆ ಎಂದು ಮೃತ ಮಹಿಳೆಯ ಸಂಬಂಧಿಕರು ಆರೋಪಿಸಿದ್ದು, ಆರೋಗ್ಯ ಇಲಾಖೆ ತನಿಖಾ ಸಮಿತಿ ನೇಮಕ ಮಾಡಿದೆ.