ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಲ್ಲಿದ್ದು, ಇದರ ಅನ್ವಯ ಕೆಲವೊಂದು ಅನಿಷ್ಟ ಪದ್ಧತಿಗಳ ಆಚರಣೆಗೆ ನಿಷೇಧವಿದೆ. ಇದರ ಮಧ್ಯೆಯೂ ಕೆಲವೊಂದು ಭಾಗಗಳಲ್ಲಿ ಆಚರಣೆ ನಡೆಸಲಾಗುತ್ತಿದ್ದು, ಇದೀಗ ಇದಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಹೌದು, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಿಡಿ ಆಚರಿಸುತ್ತಿದ್ದ ವೇಳೆ ಕೆಳಗೆ ಬಿದ್ದು ಲಕ್ಷ್ಮೀಬಾಯಿ ಪೂಜಾರಿ ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಸಿಡಿ ಆಚರಣೆ ವೇಳೆ ಬಾಯಿ, ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿಕೊಂಡು ಮೇಲಕ್ಕೆ ಎತ್ತಿ ಸುತ್ತಿಸಲಾಗುತ್ತದೆ. ಇದಕ್ಕೆ ರಾಜ್ಯದಲ್ಲಿ ನಿಷೇಧವಿದ್ದು, ಆದರೆ ಮಹಿಳೆ ಇದರ ಆಚರಣೆ ವೇಳೆ ಸಾವಿಗೀಡಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.