ಯಾದಗಿರಿ: ಬಾಣಂತಿಯೊಬ್ಬಳು ಸರ್ಕಾರಿ ಆಸ್ಪತ್ರೆಯ ವೈದ್ಯಯ ಬೇಜವಬ್ದಾರಿಯಿಂದಾಗಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದೋರನಹಳ್ಳಿ ಗ್ರಾಮದ ಭವಾನಿ ಎಂದು ಗುರುತಿಸಲಾಗಿದೆ. ತುಂಬು ಗರ್ಭಿಣಿಯಾಗಿದ್ದ ಭವಾನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಭವಾನಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ತಪಾಸಣೆ ಮಾಡಿಸಬೇಕು ಎಂದ ವೈದ್ಯರು ರಕ್ತ ಪಡೆದು ತಪಾಸಣೆಗೆ ಕಳುಹಿಸಿದರು. ವರದಿ ಬರುವ ಮುನ್ನವೇ ಆಸ್ಪತ್ರೆ ವೈದ್ಯೆ ಸಿಜೇರಿಯನ್ ಮಾಡಿ ಹೆರಿಗೆ ಮಾಡಿಸಿದ್ದಾರೆ. ಬಳಿಕ ರಕ್ತದ ವರದಿ ಬಂದಿದೆ. ವರದಿಯಲ್ಲಿ ಭವಾನಿಗೆ ಕಾಮಾಲೆಯಿರುವುದು ಪತ್ತೆಯಾಗಿದೆ. ಇದರಿಂದ ವೈದ್ಯರೂ ಗಾಭರಿಯಾಗಿದ್ದಾರೆ. ಹೆರಿಗೆಯಾದ ಒಂದು ಗಂಟೆ ಬಳಿಕ ಭವಾನಿಗೆ ರಕ್ತಸ್ರಾವ ಹೆಚ್ಚಾಗಿದೆ.
ಆಕೆಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ವೈದ್ಯರೇ ಶಿಫ್ಟ್ ಮಾಡಿದ್ದಾರೆ. ಅಲ್ಲಿನ ವೈದ್ಯರು ಆಪರೇಷನ್ ಫೇಲ್ ಆಗಿದೆ ಮತ್ತೊಮ್ಮೆ ಆಪರೇಷನ್ ಮಾಡಬೇಕು ಎಂದಿದ್ದಾರೆ. ತಾಲೂಕು ಆಸ್ಪತ್ರೆ ವೈದ್ಯೆ ಸರೋಜಾ ಪಾಟೀಲ್ ಸಮ್ಮುಖದಲ್ಲಿಯೇ ಮತ್ತೊಂದು ಆಪರೇಷನ್ ಮಾಡಲಾಗಿದೆ. 10 ಲಕ್ಷ ಬಿಲ್ ಮಾಡಿದ್ದಾರೆ. ಬಿಲ್ ಪಾವತಿ ಮಾಡಲಾಗಿತ್ತು. ಆದರೂ ಬಾಣಂತಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಮತ್ತೆ ಹೊಟ್ಟೆನೋವು ಹೆಚ್ಚಾಗುತ್ತಿದ್ದಂತೆ ಶಹಾಪುರ ತಾಲೂಕು ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಬಾಣಂತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಸರ್ಕಾರಿ ಆಸ್ಪತ್ರೆ ವೈದ್ಯೆಯ ಎಡವಟ್ಟಿನಿಂದಲೇ ಭವಾನಿ ಸಾವನ್ನಪ್ಪಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬದವರು ಆಗ್ರಹಿಸಿದ್ದಾರೆ.