
ಮಂಗಳೂರು: ಕೆಲ ತಿಂಗಳ ಹಿಂದೆ ಸಾಕು ನಾಯಿ ಕಚ್ಚಿದ್ದನ್ನು ನಿರ್ಲಕ್ಷ ಮಾಡಿದ್ದ ಮಹಿಳೆ ರೇಬಿಸ್ ಕಾಯಿಲೆಯಿಂದ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿತ್ತು. ಇದೀಗ ಇಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ತೋಟದ ಕೆಲಸಕ್ಕೆ ಹೋಗಿದ್ದ ಮಹಿಳೆಗೆ ನಾಯಿ ಕಚ್ಚಿದ್ದ ಪರಿಣಾಮ ರೇಬಿಸ್ ಕಾಯಿಲೆಯಿಂದ ಮಹಿಳೆ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದಿದೆ.
42 ವರ್ಷದ ಮಹಿಳೆ ರೇಬಿಸ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಹಿಳೆ ಮಾರ್ಚ್ 7ರಂದು ಅರಂತೋಡಿಯ ತೋಟದ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಬೀದಿಯಲ್ಲಿದ್ದ ನಾಯಿಮರಿ ಕಚ್ಚಿತ್ತು. ನಾಯಿ ಮರಿ ಎಂದು ಮಹಿಳೆ ನಿರ್ಲಕ್ಷ ಮಾಡಿದ್ದರು.
ಮಹಿಳೆಗೆ ಮಾರ್ಚ್ 17ರಂದು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅನಾರೋಗ್ಯಕ್ಕೀಡಾದ ಮಹಿಳೆ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ನೀರು ನೋಡಿದ ಮಹಿಳೆ ಏಕಾಏಕಿ ಕಿರುಚಾಡಲು ಆರಂಭಿಸಿದ್ದರು. ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದರು. ವೈದ್ಯರು ಸಮಾಧಾನದಿಂದ ಮಹಿಳೆಯನ್ನು ಪ್ರಶ್ನಿಸಿ ವಿಚಾರಿಸಿದ್ದಾರೆ. ಈ ವೇಳೆ ಕೆಲದಿನಗಳ ಹಿಂದೆ ನಾಯಿ ಕಚ್ಚಿದ್ದ ಬಗ್ಗೆ ಮಹಿಳೆ ಹೇಳಿದ್ದಾರೆ.
ಪರಿಸ್ಥಿತಿ ಗಂಭೀರತೆ ಅರಿತ ವೈದ್ಯರು ಮಹಿಳೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದರು. ವೆನಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಇಂದು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ವೈದ್ಯಕೀಯ ವರದಿಯಲ್ಲಿ ಮಹಿಳೆಗೆ ರೇಬಿಸ್ ಸೋಂಕು ತಗುಲಿರುವುದು ದೃಢವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಿಳೆ ಕುಟುಂಬದವರಿಗೆ, ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿದ್ದವರಿಗೆ ರೇಬಿಸ್ ವಿರೋಧಿ ಲಸಿಕೆಗಳನ್ನು ನೀಡಿದ್ದಾರೆ.
ಮಹಿಳೆಗೆ ಕಚ್ಚಿದ್ದ ನಾಯಿಮರಿ ಇತರರಿಗೂ ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ನಾಯಿ ಕಚ್ಚಿದರೆ ತಕ್ಷಣ ಆಸ್ಪತ್ರೆಗೆಗಳಿಗೆ ತೆರಳಿ ಲಸಿಕೆ ಪಡೆಯುವಂತೆ ಆರೋಗ್ಯ ಅಧಿಕಾರಿಗಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.