
ಮಕ್ಕಳ ಶಾಲೆಯ ಫೀಸ್ ಕಟ್ಟಲಾಗದೇ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಲಾತೂರ್ ನ ನಿಲಂಗಾ ತಹಶೀಲ್ ನಲ್ಲಿ ನಡೆದಿದೆ.
26 ವರ್ಷದ ಭಾಗ್ಯಶ್ರೀ ಎಂಬ ಮಹಿಳೆ ತನ್ನ 5 ವರ್ಷದ ಮಗಳೊಂದಿಗೆ ಸಾವಿಗೆ ಶರಣಾಗಿದ್ದಾಳೆ. ತನ್ನ ಮಗಳು ಹಾಗೂ ಮಗನನ್ನು ಸಿಬಿಎಸ್ ಇ ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. ತನಗೆ ಶಾಲಾ ಶುಲ್ಕ ಭರಿಸಲು ಆಗದು ಎಂದು ಮನನೊಂದ ಮಹಿಳೆ 5 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯ ಪತಿ ಒಂದುವರೆ ಎಕರೆ ಜಮೀನು ಹೊಂದಿದ್ದರು. ಜೀವನೋಪಾಯಕ್ಕಾಗಿ ಮೇಕೆಯನ್ನೂ ಸಾಕಿದ್ದರು ಎನ್ನಲಾಗಿದೆ. ಭಾಗ್ಯಶ್ರೀ ಹಾಗೂ ವೆಂಕಟೇಶ್ ದಂಪತಿಗೆ ಇಬ್ಬರು ಮಕ್ಕಳು. ಮಗ ಹಾಗೂ ಮಗಳು ಇಬ್ಬರನ್ನೂ ಸಿಬಿಎಸ್ ಇ ಸಂಯೋಜಿತ ಶಾಲೆಗೆ ಕಳುಹಿಸಲು ಯತ್ನಿಸಿದ್ದಳು. ಇದು ತನ್ನ ಪತಿಯ ಸಾಮರ್ಥ್ಯಕ್ಕೆ ಮೀರಿದ್ದಾಗಿದ್ದು, ಮಕ್ಕಳನ್ನು ಚನ್ನಾಗಿ ಓದಿಸಲು ಸಾಧ್ಯವಿಲ್ಲ ಎಂದು ತೀವ್ರವಾಗಿ ಮನನೊಂದಿದ್ದಳು. ಇದೇ ನೋವಿನಿಂದ ಭಾಗ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಾವಿಗೆ ಹಾರುವ ಮುನ್ನ ಭಾಗ್ಯಶ್ರೀ ಪತಿ ವೆಂಕಟೇಶ್ ಹಲ್ಸೆಗೆ ವಿಡಿಯೋ ಕಾಲ್ ಮಾಡಿದ್ದು, ಮಗಳ ಮುಖವನ್ನು ಕೊನೇ ಬಾರಿ ನೋಡಿ ಎಂದು ಮಗಳನ್ನು ತೋರಿಸಿದ್ದಾಳೆ. ಬಳಿಕ ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.