ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ವಿಚಿತ್ರ ಬೆಳವಣಿಗೆಯೊಂದರಲ್ಲಿ ಒಂದೇ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಾಯಿ ಮತ್ತು ಮಗಳು ಮದುವೆಯಾಗಿದ್ದಾರೆ. 53 ವರ್ಷದ ಮಹಿಳೆ ಹಾಗೂ ಆಕೆಯ 27 ವರ್ಷದ ಪುತ್ರಿ ಒಂದೇ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗೋರಖ್ ಪುರ ದ ಪಿಪ್ರೌಲಿ ಬ್ಲಾಕ್ನಲ್ಲಿ ಗುರುವಾರ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ 63 ಜೋಡಿಗಳ ಮದುವೆ ನೆರವೇರಿದೆ. ಈ ಸಮಾರಂಭದಲ್ಲಿ ವಿಧವೆಯಾಗಿರುವ ಮಹಿಳೆ ತನ್ನ ಗಂಡನ ಕಿರಿಯ ಸಹೋದರನನ್ನು ಮದುವೆಯಾಗಿದ್ದಾಳೆ. ಆಕೆಯ ಪುತ್ರಿ ಕೂಡ ಇದೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ರಾಹುಲ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.
ಬೇಲಿ ದೇವಿ ಎಂಬ ಮಹಿಳೆ 25 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದಾರೆ. ಆಕೆಗೆ ಮೊದಲ ಗಂಡನಿಂದ ಮೂವರು ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಕಿರಿಯ ಮಗಳನ್ನು ಹೊರತುಪಡಿಸಿ ಉಳಿದ ಎಲ್ಲ ಮಕ್ಕಳ ಮದುವೆಯಾಗಿ ಅವರ ಕುಟುಂಬದವರೊಂದಿಗೆ ನೆಲೆಸಿದ್ದಾರೆ. ತನ್ನ ಉಳಿದ ಜೀವನವನ್ನು ಗಂಡನ ಕಿರಿಯ ಸಹೋದರ ಜಗದೀಶ್(55) ಜೊತೆಗೆ ಕಳೆಯಲು ನಿರ್ಧರಿಸಿದ ಬೇಲಿ ದೇವಿ ಮೈದುನನನ್ನು ಮದುವೆಯಾಗಿದ್ದಾಳೆ.
ಅಂದ ಹಾಗೆ, ಜಗದೀಶ್ ರೈತನಾಗಿದ್ದು ಇನ್ನೂ ಅವಿವಾಹಿತರಾಗಿದ್ದರು. ನನ್ನ ಕಿರಿಯ ಮಗಳ ಮದುವೆಯಲ್ಲಿ ಗಂಡನ ಕಿರಿಯ ಸಹೋದರನನ್ನು ಮದುವೆಯಾಗಲು ನಿರ್ಧರಿಸಿದೆ. ಇದಕ್ಕೆ ನನ್ನ ಎಲ್ಲ ಮಕ್ಕಳು ಬೆಂಬಲವಾಗಿ ನಿಂತಿದ್ದಾರೆ ಎಂದು ಬೇಲಿ ದೇವಿ ತಿಳಿಸಿದ್ದಾರೆ.
ತಂದೆಯ ನಿಧನದ ನಂತರ ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಅವರಿಬ್ಬರೂ ಒಟ್ಟಾಗಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ ಎಂದು ಕಿರಿಯ ಪುತ್ರಿ ಇಂದೂ ಹೇಳಿದ್ದಾರೆ.