ಇನ್ಸ್ಟಾಗ್ರಾಂ ರೀಲ್ಸ್ ಮಾಡುವ ಹುಚ್ಚಿನಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕ ಅಸಭ್ಯತೆ ಸೃಷ್ಟಿಸುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ರೈಲು, ಬಸ್ಸು, ಮೆಟ್ರೋಗಳಲ್ಲೆಲ್ಲಾ ಹುಚ್ಚು ಬಂದಂತೆ ಕುಣಿಯುವ ಯುವತಿಯರು ಬಲುಬೇಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾರೆ. ಇವರ ಈ ಹುಚ್ಚಾಟಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜಾಗಗಳೂ ಹೊರತಾಗುತ್ತಿಲ್ಲ!
ಅಯೋಧ್ಯೆಯ ಸರಯೂ ನದಿಯಲ್ಲಿ ಯುವತಿಯೊಬ್ಬಳು ಕುಣಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ’ಟಿಪ್ ಟಿಪ್ ಬರ್ಸಾ ಪಾನಿ’ ಹಾಡಿಗೆ ಕುಣಿಯುತ್ತಿರುವ ಈ ಯುವತಿಯ ಹುಚ್ಚಾಟಕ್ಕೆ ನೆಟ್ಟಿಗರಿಂದ ಭಾರೀ ಟೀಕೆಗಳು ವ್ಯಕ್ತವಾಗಿವೆ.
“ಅಯೋಧ್ಯೆಗೆ ದೇಶ ವಿದೇಶಗಳಿಂದ ಬರುವ ಭಕ್ತರು ರಾಮದ ಪಾದದಲ್ಲಿ ಹರಿಯುವ ಸರಯೂ ನದಿಯಲ್ಲಿ ಸ್ನಾನ ಹಾಗೂ ಧ್ಯಾನಗಳನ್ನು ಮಾಡುತ್ತಾ ಅದರ ಶುಭ್ರತೆಯನ್ನು ಅನುಭವಿಸುತ್ತಾರೆ. ಅಯೋಧ್ಯೆ ಪೊಲೀಸ್, ಉತ್ತರ ಪ್ರದೇಶ ಪೊಲೀಸ್, ಅಯೋಧ್ಯೆ ವಲಯದ ಐಜಿ, ದಯವಿಟ್ಟು ಕ್ರಮ ತೆಗೆದುಕೊಳ್ಳಲು ಸೂಚನೆಗಳನ್ನು ನೀಡಿ,” ಎಂದು ಯುವತಿಯ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಮಹೇಶ್ ಕುಮಾರ್ ಶ್ರೀವಾಸ್ತವ ಹೆಸರಿನ ನೆಟ್ಟಿಗರೊಬ್ಬರು, ಆಕೆಯ ವಿರುದ್ಧ ಪೊಲೀಸ್ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಯೋಧ್ಯೆ ಪೊಲೀಸ್, “ನಿಯಮಗಳ ಅನುಸಾರ ಅಯೋಧ್ಯೆಯ ಇನ್ಸ್‌ಪೆಕ್ಟರ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ,” ಎಂದು ಟ್ವಿಟ್ ಮಾಡಿದೆ.