ಮಹಿಳಾ ಕಾನ್ಸ್ಟೇಬಲ್ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರಗೈದದ್ದು ಮಾತ್ರವಲ್ಲದೇ ಅತ್ಯಾಚಾರದ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿದ ಅಮಾನವೀಯ ಘಟನೆಯು ಮಧ್ಯ ಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳಾ ಪೇದೆಗೆ ಈ ಮೂವರು ಕೊಲೆ ಬೆದರಿಕೆಯನ್ನೂ ಒಡ್ಡಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 13ರಂದು 30 ವರ್ಷದ ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಪೇದೆ ನೀಡಿದ ದೂರನ್ನು ಆಧರಿಸಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಆರೋಪಿಯ ತಾಯಿ ಕೂಡ ಸೇರಿದ್ದಾರೆ.
ಬರ್ತಡೇ ಪಾರ್ಟಿಯಲ್ಲಿ ಪ್ರಕರಣದ ಪ್ರಮುಖ ಆರೋಪಿ, ಆತನ ಸಹೋದರ ಹಾಗೂ ಮತ್ತೊಬ್ಬ ವ್ಯಕ್ತಿ ನನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿಯ ತಾಯಿ ಹಾಗೂ ಅವರ ಸಹೋದರರು ನನಗೆ ಕೊಲೆ ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಬ್ಲಾಕ್ಮೇಲ್ ಮಾಡಿ ಹಣ ಪೀಕಲು ಮುಂದಾಗಿದ್ದರು ಎಂದು ಹೇಳಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಹಿಳಾ ಪೇದೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದರು. ಬಳಿಕ ವಾಟ್ಸಾಪ್ನಲ್ಲಿ ಚಾಟಿಂಗ್ ಕೂಡ ಶುರುವಾಗಿತ್ತು. ತನ್ನ ಕಿರಿಯ ಸಹೋದರನ ಜನ್ಮದಿನದ ಪಾರ್ಟಿ ಇದೆ ಎಂದು ಹೇಳಿ ಮಹಿಳಾ ಪೇದೆಯನ್ನು ಆರೋಪಿ ಆಹ್ವಾನಿಸಿದ್ದ. ಇಲ್ಲಿ ಆಕೆಯ ಮೇಲೆ ಮೂವರು ಅತ್ಯಾಚಾರಗೈದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ರು.