ನವದೆಹಲಿ: ಜನಿಸಿದ ನಂತರ ಮಗು ಮೃತಪಟ್ಟರೂ ಕೂಡ ಕೇಂದ್ರ ಸರ್ಕಾರದ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ 60 ದಿನ ವಿಶೇಷ ರಜೆ ನೀಡಲಾಗುತ್ತದೆ.
ಜನನದ ವೇಳೆ ಹಾಗೂ ಜನಿಸಿದ ನಂತರ ಮಗು ಮೃತಪಟ್ಟಿದ್ದಲ್ಲಿ ತಾಯಿಗೆ ಆಗುವ ಆಘಾತ ಗಮನದಲ್ಲಿಟ್ಟುಕೊಂಡು 60 ದಿನ ವಿಶೇಷ ರಜೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜೊತೆ ಚರ್ಚೆ ನಡೆಸಿದ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಮಹಿಳಾ ಉದ್ಯೋಗಿ ಈಗಾಗಲೇ ಹೆರಿಗೆ ರಜೆ ಪಡೆದುಕೊಂಡಿದ್ದರೆ ಅವರು ಮಗುವಿನ ಸಾವಿಗಿಂತ ಮೊದಲು ಪಡೆದ ರಜೆಯನ್ನು ಅವರ ಖಾತೆಯಲ್ಲಿದ್ದ ಬೇರೆ ರಜೆಯಾಗಿ ಪರಿವರ್ತಿಸಬೇಕು. ಇದಕ್ಕಾಗಿ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವ ಅಗತ್ಯವಿಲ್ಲ. ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಕೇಳದೇ ಮಗು ಮೃತಪಟ್ಟ ಬಳಿಕ 60 ದಿನಗಳ ವಿಶೇಷ ಹೆರಿಗೆ ನೀಡಬೇಕು ಎಂದು ಹೇಳಲಾಗಿದೆ.
ಹೆರಿಗೆಯಾದ ಕೂಡಲೇ ಮೊದಲ ಮಗುವನ್ನು ಕಳೆದುಕೊಂಡಿರುವ ಕೇಂದ್ರ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 60 ದಿನಗಳ ವಿಶೇಷ ಹೆರಿಗೆ ರಜೆಯನ್ನು ನೀಡಲಾಗುವುದು ಎಂದು ಕೇಂದ್ರ ಸರಕಾರ ಶುಕ್ರವಾರ ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ತಾಯಿಯ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುವ, ಜನನದ ನಂತರ ಮಗುವಿನ ಮರಣ ಅಥವಾ ಮರಣದ ಕಾರಣದಿಂದ ಉಂಟಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.