ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ಇತ್ತೀಚಿಗೆ ಫ್ಯಾಷನ್ ಆಗಿದೆ. ಭಾರತದಲ್ಲಿ ಟ್ಯಾಟೂ ಹಾಕಿಸಿಕೊಂಡರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಗುವುದಿಲ್ಲ. ಅದೆಷ್ಟೋ ಜನ ಪೊಲೀಸ್ ಆಗಬೇಕೆಂದು ಆಸೆಯಿದ್ದವರು ಟ್ಯಾಟೂ ಹಾಕಿಸಿಕೊಂಡಿದ್ದರಿಂದ ಪರಿತಪಿಸಿದ್ದಾರೆ. ಇಂಥದ್ದೇ ರೀತಿಯ ಘಟನೆಯೊಂದರಲ್ಲಿ ಬ್ರಿಟನ್ ನಲ್ಲಿ ಮಹಿಳೆಯೊಬ್ಬರು ಟ್ಯಾಟೂ ಹಾಕಿಸಿಕೊಂಡಿರುವ ಪರಿಣಾಮ ಬಾತ್ ರೂಂ ಕ್ಲೀನ್ ಮಾಡುವ ಕೆಲಸವೂ ಸಿಗದೇ ಒದ್ದಾಡುತ್ತಿದ್ದಾರೆ.
ಮೈಮೇಲೆ 800 ಟ್ಯಾಟೂಗಳನ್ನು ಹೊಂದಿರುವ ಮಹಿಳೆಯು ಕೆಲಸವೊಂದನ್ನ ಪಡೆಯಲು ಪರದಾಡುತ್ತಿದ್ದು
ಹೋದಲ್ಲೆಲ್ಲಾ ಅವರನ್ನ ನಿರಾಕರಿಸಲಾಗಿದೆ. ತನ್ನ 800 ಟ್ಯಾಟೂಗಳಿಂದ ಒಂದು ಉದ್ಯೋಗವನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ . ಏಕೆಂದರೆ ಉದ್ಯೋಗದಾತರು ತನ್ನ ಹಚ್ಚೆಯನ್ನು ಟೀಕಿಸುತ್ತಾರೆಂದು ಮಹಿಳೆ ಹೇಳಿಕೊಂಡಿದ್ದಾರೆ.
ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬ್ರಿಟನ್ ನ ವೇಲ್ಸ್ ನ 46 ವರ್ಷದ ಮೆಲಿಸ್ಸಾ ಸ್ಲೋನ್, ಈ ಹಿಂದೆ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಹೊಂದಿದ್ದರು. ಆದರೆ ಅವರ ಮುಖ ಮತ್ತು ದೇಹದ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದು, ಅಂಥದ್ದೇ ಕೆಲಸವನ್ನು ಮತ್ತೆ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
“ನನಗೆ ಕೆಲಸ ಸಿಗುತ್ತಿಲ್ಲ” ಎಂದು ಸ್ಲೋನ್ ಡೈಲಿ ಸ್ಟಾರ್‌ಗೆ ಅವರು ನೇರವಾಗಿ ಹೇಳಿದ್ದಾರೆ. ನಾನು ವಾಸಿಸುವ ಪ್ರದೇಶದಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ನಾನು ಅರ್ಜಿ ಸಲ್ಲಿಸಿದ್ದೆ. ಆದರೆ ನನ್ನ ಟ್ಯಾಟೂನಿಂದಾಗಿ ಅವರು ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಮೆಲಿಸ್ಸಾ ತಿಳಿಸಿದ್ದಾರೆ.
ಮೆಲಿಸ್ಸಾ ಸ್ಲೋನ್ ಮೊದಲ ಬಾರಿಗೆ 20 ನೇ ವಯಸ್ಸಿನಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಪ್ರಾರಂಭಿಸಿದರು . ವಾರಕ್ಕೊಮ್ಮೆ ಕನಿಷ್ಠ ಮೂರು ಟ್ಯಾಟೂಗಳನ್ನಾದರೂ ಮೆಲಿಸ್ಸಾ ಹಾಕಿಸಿಕೊಳ್ಳುತ್ತಾರಂತೆ. ಟ್ಯಾಟು ಹಾಕಿಸಿಕೊಳ್ಳುವ ಗೀಳು ಹೊಂದಿರುವ ಅವರ ಮುಖವೆಲ್ಲಾ ಇದೀಗ ನೀಲಿ ಬಣ್ಣಕ್ಕೆ ತಿರುಗಿದೆ. ಹಳೆಯ ಟ್ಯಾಟೂಗಳ ಮೇಲೆಯೇ ಮತ್ತೆ ಮತ್ತೆ ಹಚ್ಚೆ ಹಾಕಿಸಿಕೊಳ್ಳುವ ಮೆಲಿಸ್ಸಾ ಇದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.