ತಾಲಿಬಾನ್ ನೇತೃತ್ವದ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ಧವಾಗುತ್ತಿರುವ ಬೆನ್ನಲ್ಲೇ ಮಹಿಳೆಯರ ಕುರಿತಂತೆ ಉಗ್ರ ತಾಲಿಬಾನ್ ಸಂಘಟನೆಯ ವಕ್ತಾರ ನೀಡಿರುವ ಹೇಳಿಕೆಯು ಭಾರೀ ವಿವಾದವನ್ನು ಸೃಷ್ಟಿಸಿದೆ.
ಮಹಿಳೆಯರು ಮಂತ್ರಿಗಳಾಗಲು ಸಾಧ್ಯವೇ ಇಲ್ಲ. ಅವರ ಕೆಲಸ ಏನಿದ್ದರೂ ಮಕ್ಕಳನ್ನು ಹೆರುವುದು ಎಂದು ತಾಲಿಬಾನ್ ವಕ್ತಾರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ 1990ರ ದಶಕದಂತೆ ಆಡಳಿತ ನೀಡುವುದಿಲ್ಲ ಎಂಬ ತಾಲಿಬಾನ್ ಹೇಳಿಕೆಯು ಮತ್ತೊಮ್ಮೆ ಸುಳ್ಳು ಎಂದು ಸಾಬೀತಾದಂತಾಗಿದೆ.
ಮಹಿಳೆಯರು ಮಂತ್ರಿಗಳಾಗಲು ಸಾಧ್ಯವೇ ಇಲ್ಲ. ಇದು ಒಂದು ರೀತಿಯಲ್ಲಿ ಆಕೆಯ ಕೈಯಲ್ಲಿ ನಿರ್ವಹಿಸಲು ಸಾಧ್ಯವಾಗದ ಕೆಲಸವೊಂದನ್ನು ಅವರ ಹೆಗಲಿಗೇರಿಸಿದಂತೆ. ಅಲ್ಲದೇ ಮಹಿಳೆಯರು ಸಂಪುಟದಲ್ಲಿ ಸ್ಥಾನ ಪಡೆಯಲೇಬೇಕು ಎಂಬ ಅನಿವಾರ್ಯತೆ ಕೂಡ ಇಲ್ಲ. ಅವರು ಮಕ್ಕಳಿಗೆ ಜನ್ಮ ನೀಡಬೇಕು ಅಷ್ಟೇ ಎಂದು ತಾಲಿಬಾನ್ ವಕ್ತಾರ ಸಾಯದ್ ಜೆಕ್ರುಲ್ಲಾ ಹಶಿಮಿ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಪ್ರತಿಭಟನೆ ವಿಚಾರವಾಗಿಯೂ ಮಾತನಾಡಿದ ಹಶಿಮಿ, ಮಹಿಳಾ ಪ್ರತಿಭಟನಾಕಾರರು ಅಫ್ಘನ್ನ ಎಲ್ಲಾ ಮಹಿಳೆಯರನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.
ಮಹಿಳೆಯರು ಸಮಾಜದ ಅರ್ಧ ಭಾಗವಾಗಿದ್ದಾರೆ ಎಂದು ಹೇಳಿದ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಹಶಿಮಿ, ನಾವು ಅವರನ್ನು ಆ ರೀತಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅರ್ಧ ಎಂದರೇನು..? ಅರ್ಧ ಎಂಬುದನ್ನು ಇಲ್ಲಿ ತಪ್ಪಾಗಿ ವ್ಯಾಖ್ಯಾನಿಸಲಾಗಿದೆ.ಅರ್ಧ ಎಂದರೆ ನೀವು ಅವರನ್ನು ಕ್ಯಾಬಿನೆಟ್ನಲ್ಲಿ ಇರಿಸಿಕೊಳ್ಳಿ, ಮತ್ತೇನಿಲ್ಲ. ಆಕೆಯ ಹಕ್ಕುಗಳನ್ನು ಉಲ್ಲಂಘಿಸಿದರೆ ಅದೇನು ದೊಡ್ಡ ಸಮಸ್ಯೆಯಲ್ಲ ಎಂದು ಹೇಳಿದ್ದಾರೆ.