ಗುವಾಹಟಿ: ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ಶಂಕಿಸಿದ ಗುಂಪೊಂದು ಸಜೀವ ದಹನ ಮಾಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಸಂತ್ರಸ್ತೆ, ಆದಿವಾಸಿ ಮಹಿಳೆ ಸಂಗೀತಾ ಕಪಿ ಎಂದು ಗುರುತಿಸಲಾಗಿದ್ದು, ಆಕೆ ಮೂರು ಮಕ್ಕಳ ತಾಯಿಯಾಗಿದ್ದಾಳೆ. ಉತ್ತರ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಒಂದೇ ಗ್ರಾಮದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರ ಪತಿ ರಾಮ್ ಕಪಿ ಸುದ್ದಿಗಾರರೊಂದಿಗೆ ಮಾತನಾಡಿ, ಪತ್ನಿ ಅಡುಗೆ ಮಾಡುತ್ತಿದ್ದಾಗ ದುಷ್ಕರ್ಮಿಗಳು ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಅವಳನ್ನು ಮಾಟಗಾತಿ ಎಂದು ಬ್ರಾಂಡ್ ಮಾಡಿ ಹೊಡೆದರು. ಹೊಡೆಯಬೇಡಿ ಬೆಳಿಗ್ಗೆ ಬನ್ನಿ ಎಂದು ನಾನು ಅವರನ್ನು ವಿನಂತಿಸಿದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ನನಗೂ ಥಳಿಸಿದರು ಎಂದು ತಿಳಿಸಿದ್ದಾರೆ.
ನಮ್ಮನ್ನು ಥಳಿಸುತ್ತಿರುವುದನ್ನು ನೋಡಿ ನನ್ನ ಮೂವರು ಮಕ್ಕಳು ಅಳುತ್ತಿದ್ದಾಗ, ನಾನು ಅವರನ್ನು ಹತ್ತಿರದಲ್ಲಿ ವಾಸಿಸುವ ನನ್ನ ಸಹೋದರನ ಮನೆಗೆ ಬಿಡಲು ಅವರನ್ನು ಕರೆದುಕೊಂಡು ಹೊರಟೆ. ನಾನು ಹಿಂತಿರುಗಿದಾಗ ನನ್ನ ಮನೆಗೆ ಬೆಂಕಿ ಬಿದ್ದಿರುವುದನ್ನು ನೋಡಿದೆ ಎಂದು ಹೇಳಿದ್ದಾರೆ.
ನಂತರ ಮೃತದೇಹವನ್ನು ತೇಜ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆಯಲು ಪೊಲೀಸ್ ತಂಡ ಗ್ರಾಮಕ್ಕೆ ಭೇಟಿ ನೀಡಿತ್ತು. ಮಹಿಳೆಯನ್ನು ಸಜೀವ ದಹನ ಮಾಡಲಾಗಿದೆ ಎಂಬ ಆರೋಪವಿದೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.