21ರ ಯುವತಿಗೆ ಜಗತ್ತನ್ನೇ ಸುತ್ತುವ ಕನಸು ಇರುವುದು ಸಾಮಾನ್ಯ. ಅದು ಹದಿಹರೆಯ ಕೂಡ ಹೌದು. ಆದರೆ ತನ್ನ ತಾಯಿಯು ಪರಪುರುಷನೊಂದಿಗೆ ಪ್ರೇಮದಲ್ಲಿ ಸಿಕ್ಕಿದ್ದಾಳೆ ಎಂದು ಅರಿತರೆ ಯುವತಿಯು ಬಹುಶಃ ಜಗಳವಾಡುತ್ತಾಳೆ. ಸಾಧ್ಯವಾದರೆ ತಾಯಿಗೆ ಬುದ್ಧಿ ಹೇಳುತ್ತಾಳೆ. ಪುಣೆಯ ಈ ಯುವತಿ ಮಾಡಿದ್ದು ಮಾತ್ರ ಫುಲ್ ಡಿಫರೆಂಟ್..!
ತನ್ನ ತಾಯಿಯ ಸ್ಮಾರ್ಟ್‍ಫೋನ್‍ನಲ್ಲಿ ವಾಟ್ಸಾಪ್ ಚಾಟ್ ಹುಡುಕಾಡುತ್ತಿದ್ದ ಯುವತಿಗೆ ಸಿಕ್ಕಿತ್ತು 42 ವರ್ಷದ ವ್ಯಕ್ತಿಯ ಪ್ರೇಮ ಸಲ್ಲಾಪದ ಸಂದೇಶಗಳು. ಇದರಿಂದ ಯುವತಿಗೆ ಆ ವ್ಯಕ್ತಿಯಿಂದ ಹಣ ಬಾಚಿಕೊಳ್ಳುವ ದುರುದ್ದೇಶ ಮೂಡಿತ್ತು. ತಾಯಿಗೆ ತಿಳಿಯದಂತೆ ಸಂದೇಶಗಳನ್ನು ಟ್ರಾನ್ಸ್‌ಫರ್ ಮಾಡಿಕೊಂಡು, ತನ್ನ ಆಪ್ತ ಸ್ನೇಹಿತರೊಂದಿಗೆ ಸೇರಿಕೊಂಡು ಯುವತಿಯು ವ್ಯಕ್ತಿಯನ್ನು ಹಣಕ್ಕಾಗಿ ಬೆದರಿಸಲು ಶುರು ಮಾಡಿದ್ದಳು. ಮಾಡಿದ ತಪ್ಪಿಗೆ ಹೆದರಿದ್ದ ಆತ 2.6 ಲಕ್ಷ ರೂ. ಕೊಟ್ಟು ಬಚಾವಾಗಲು ಯತ್ನಿಸಿದ್ದ.
ಹೆಚ್ಚು ಹಣಕ್ಕಾಗಿ ಯುವತಿಯ ಗ್ಯಾಂಗ್ ನಿತ್ಯ ಪೀಡಿಸಲು ಶುರು ಮಾಡಿದಾಗ 42 ವರ್ಷದ ವ್ಯಕ್ತಿ ಅನಿವಾರ್ಯವಾಗಿ ಪೊಲೀಸರ ಮೊರೆಹೋದರು. ಪುಣೆ ನಗರದ ಘಟಕದ ವಸೂಲಿ ತಡೆ ವಿಭಾಗದ ಪೊಲೀಸರ ತಂಡ ಯುವತಿಯ ಗ್ಯಾಂಗ್ ಬೆನ್ನತ್ತಿ ಎಲ್ಲರನ್ನು ಬಂಧಿಸಿ ಜೈಲಿಗಟ್ಟಿದೆ. 1 ಲಕ್ಷ ರೂ. ನೀಡುವ ಆಮಿಷ ತೋರಿಸಿದ ವ್ಯಕ್ತಿಯು, ಪೊಲೀಸರು ಹೇಳಿದ ಜಾಗಕ್ಕೆ ಯುವತಿಯ ಗ್ಯಾಂಗ್ ಅನ್ನು ಕರೆಸಿಕೊಂಡಿದ್ದ. ಈ ವೇಳೆ ಸ್ಥಳ ಸುತ್ತುವರಿದಿದ್ದ ಪೊಲೀಸರು ವಸೂಲಿಕೋರರ ಮೇಲೆ ಎರಗಿ ಅವರನ್ನು ಹಣದ ಸಮೇತರಾಗಿ ಬಂಧಿಸಿದ್ದಾರೆ.