ಬಾಂಗ್ಲಾದೇಶದಲ್ಲಿ ಕಿಕ್ಕಿರಿದು ತುಂಬಿದ್ದ ರೈಲಿನ ಟಾಪ್ ಮೇಲೆ ಜನರು ಪ್ರಯಾಣಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲಿನಲ್ಲಿ ಪ್ರಯಾಣಿಸಲು ಪರಸ್ಪರ ತಳ್ಳುವ ಮತ್ತು ಜಗಳವಾಡುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹೊರಹೊಮ್ಮುತ್ತವೆ.
ಜನದಟ್ಟಣೆಯ ಸಮಯದಲ್ಲಿ, ಸ್ಥಳದ ಕೊರತೆಯಿಂದಾಗಿ ಜನರು ರೈಲಿನ ಬಾಗಿಲುಗಳಲ್ಲಿ ನೇತಾಡುವುದುಂಟು ಆದರೆ ಈಗ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ರೈಲಿನಲ್ಲಿ ಯಾವುದೇ ಸೀಟು ಲಭ್ಯವಿಲ್ಲದ ಕಾರಣ ಮಹಿಳೆಯೊಬ್ಬರು ಬಾಂಗ್ಲಾದೇಶದ ಇಂಟರ್ಸಿಟಿ ಎಕ್ಸ್ಪ್ರೆಸ್ಗೆ ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
ಆಘಾತಕಾರಿ ಸಂಗತಿಯೆಂದರೆ ರೈಲು ಪ್ಲಾಟ್ಫಾರ್ಮ್ನಿಂದ ಹೊರಡುವ ಮೊದಲು 20ಕ್ಕೂ ಹೆಚ್ಚು ಮಂದಿ ಟಾಪ್ ಮೇಲೆ ಕುಳಿತಿದ್ದರು. ಮಹಿಳೆಯೊಬ್ಬರು ಮೇಲಕ್ಕೆ ಹತ್ತಲು ಹಲವಾರು ಪ್ರಯತ್ನಗಳನ್ನು ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆಕೆ ರೈಲಿನ ಕಿಟಕಿಯ ಬಳಿ ನಿಂತಿದ್ದು, ಟಾಪ್ ಮೇಲಿದ್ದವರಿಂದ ಸಹಾಯ ಪಡೆಯುತ್ತಾಳೆ. ಅವರು ಆಕೆಯನ್ನು ಎಳೆಯಲು ಪ್ರಯತ್ನಿಸುತ್ತಾರಾದರೂ ಪ್ರಯತ್ನ ವ್ಯರ್ಥವಾಯಿತು. ಕೊನೆಯಲ್ಲಿ ಮಹಿಳೆ ಹತ್ತುವುದನ್ನು ತಡೆಯಲು ಇಬ್ಬರು ಪೊಲೀಸರು ಸ್ಥಳಕ್ಕೆ ಆಗಮಿಸಿದರು.
ಬಾಂಗ್ಲಾದೇಶದ ರೈಲ್ವೆ ನಿಲ್ದಾಣದಲ್ಲಿ ಒಂದು ದಿನ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರಿಗೆ ಇದು ತಮಾಷೆ ವಿಷಯವಾಗಿದ್ದು, ಒಬ್ಬರು ಕಾಮೆಂಟ್ ಮಾಡಿ, ಈ ರೀತಿಯ ದೃಶ್ಯವನ್ನು ಹಿಟ್ ಚಿತ್ರ ಸನ್ನಿ ಡಿಯೋಲ್ ನಟಿಸಿರುವ ‘ಗದರ್ ಏಕ್ ಪ್ರೇಮ್ ಕಥಾ’ ಅನ್ನು ನೆನಪಿಸಿಕೊಂಡಿದ್ದಾರೆ.