ವಿಜಯಪುರ: ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ವಿಜಯಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಕುಮಠೆ ಗ್ರಾಮದ ಶಿವಲೀಲಾ ಸಂತೋಷಗೌಡ ಬಿರಾದಾರ ಶಿಕ್ಷೆಗೆ ಒಳಗಾದ ಮಹಿಳೆಯಾಗಿದ್ದಾರೆ. ಗಂಡನ ಮನೆಯವರ ಕಿರುಕುಳದ ಕಾರಣ ಶಿವಲೀಲಾ ಹತಾಶೆಯಿಂದ ಮನನೊಂದು 2017ರ ಅಕ್ಟೋಬರ್ 11ರಂದು ಮಕ್ಕಳಾದ ಸುಭಾಷ್ ಗೌಡ(2), ಶ್ರೇಯಾ(6 ತಿಂಗಳು) ಅವರನ್ನು ಜಮೀನಿನ ಬಾವಿಗೆ ತಳ್ಳಿ ನಂತರ ತಾವು ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ಕುರಿತಾಗಿ ಬಬಲೇಶ್ವರ ಠಾಣೆಯ ಸಿಪಿಐ ಶಂಕರಗೌಡ ಬಸನಗೌಡರ ತನಿಖೆ ನಡೆಸಿ ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಧ್ವೇಶ್ ಡಬೇರ ಅವರು ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ. ಮಾಮನಿ ಅವರು ವಾದ ಮಂಡಿಸಿದ್ದರು.