ಬೆಳಗಾವಿ: ಎರಡು ತಿಂಗಳ ಮಗುವನ್ನು ಕೆರೆಗೆ ಬಿಸಾಕಿದ್ದ ತಾಯಿಯನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ 2 ತಿಂಗಳ ಹೆಣ್ಣುಮಗುವನ್ನು ಕೆರೆಗೆ ಬಿಸಾಕಿ ಓಡಿ ಹೋಗುತ್ತಿದ್ದಳು. ಕೆರೆಯ ಬಳಿ ದನ-ಕರುಗಳಿಗೆ ಮೈ ತೊಳೆಯುತ್ತಿದ್ದವರು ಮಗುವನ್ನು ರಕ್ಷಿಸಿ, ಓಡಿ ಹೋಗುತಿದ್ದ ತಾಯಿಯನ್ನು ಹಿಡಿದಿದ್ದರು.
ಕಣಬರಗಿ ಗ್ರಾಮದ ಶಾಂತಿ ಕರವಿನಕೊಪ್ಪ ಎಂಬ ಮಹಿಳೆ ಹೆತ್ತ ಕಂದಮ್ಮನನ್ನೇ ಕೆರೆಗೆ ಬಿಸಾಕಿದ್ದಳು, ಮಗುವನ್ನು ರಕ್ಷಿಸಿದ್ದ ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ಮಗುವನ್ನು ದಾಖಲಿಸಿ, ಮಾಳಮಾರುತಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ, ಮಹಿಳೆ ಶಾಂತಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಶಾಂತಿ, ಮೂರು ವರ್ಷದ ಹಿಂದೆ ವಿವಾಹವಾಗಿದ್ದು, ಆಕೆಯ ಪತಿ ಹಿಂಡಾಲ್ಕೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಪತಿಕೆಲಸಕ್ಕೆ ಹೋದ ಬಳಿಕ ಮಗುವನ್ನು ಎತ್ತಿಕೊಂಡು ಕೆರೆ ಬಳಿ ಬಂದವಳು ಮಗುವನ್ನು ಕೆರೆಗೆ ಎಸೆದು ಓಡಿದ್ದಾಳೆ. ಸದ್ಯ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಕೆರೆಗೆ ಎಸೆಯಲು ಕಾರಣ ನಿರಂತರವಾಗಿ ಮಗುವಿಗೆ ಪಿಡ್ಸ್ ಬರುತ್ತಿದ್ದು, ನಿನ್ನೆಯಷ್ಟೇ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದಾಗಿ ಹಾಗೂ ಇಂದು ಮಗುವಿನ ಎರ್ಡನೇ ವರ್ಷದ ಹುಟ್ಟುಹಬ್ಬ ಇತ್ತು. ಪಿಡ್ಸ್ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಮಗುವಿನ ಹುಟ್ಟುಹಬ್ಬದ ದಿನವೇ ತಾಯಿ ಮಗುವನ್ನು ಕೊಲ್ಲಲು ಯತ್ನಿಸಿ ಬಂಧನಕ್ಕೀಡಾಗಿದ್ದಾಳೆ.