ಕೆಲ ಗಂಟೆಗಳ ಹಿಂದಷ್ಟೇ ನಾಪತ್ತೆಯಾಗಿದ್ದ ತಾಯಿ ಹಾಗೂ ಆಕೆಯ 10 ರಿಂದ 17 ವರ್ಷ ವಯಸ್ಸಿನ ಐವರು ಹೆಣ್ಣುಮಕ್ಕಳ ಶವವು ರೈಲ್ವೆ ಹಳಿಯ ಮೇಲೆ ದೊರಕಿದ ಘಟನೆ ಚತ್ತೀಸಗಢದ ಮಹಸಮುಂದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಪ್ರಕರಣ ಸಂಬಂಧ ಮಾತನಾಡಿದ ಪೊಲೀಸ್ ಸೂಪರಿಟೆಂಡೆಂಟ್ ಪ್ರಫುಲ್ಲ ಠಾಕೂರ್, ಶವಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಕೇಸ್ ಕೂಡ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಮಹಿಳೆ ತನ್ನ ಮಕ್ಕಳ ಜೊತೆ ಬುಧವಾರ ರಾತ್ರಿಯೇ ನಾಪತ್ತೆಯಾಗಿದ್ದಳು. ಆಕೆಯ ಪತಿ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನ ನೀಡದೇ ಸಂಬಂಧಿಕರ ಮನೆಗಳಿಗೆ ತೆರಳಿ ಹುಡುಕಾಟ ನಡೆಸಿದ್ದ ಎನ್ನಲಾಗಿದೆ. ಆದರೆ ಗುರುವಾರ ಬೆಳಿಗ್ಗೆ ರೈಲ್ವೆ ಹಳಿಯ ಮೇಲೆ ಆರು ಮಂದಿಯ ಶವವನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಊಟ ಮಾಡುತ್ತಿದ್ದ ವೇಳೆ ಪತಿ – ಪತ್ನಿ ನಡುವೆ ಯಾವುದೋ ವಿಚಾರವಾಗಿ ಕಲಹ ಉಂಟಾಗಿತ್ತು ಎಂದು ತಿಳಿದು ಬಂದಿದೆ ಅಂತಾ ಪೊಲೀಸ್ ಅಧಿಕಾರಿ ಹೇಳಿದ್ರು.
ಪತಿಯ ಜೊತೆ ಜಗಳ ಮಾಡಿಕೊಂಡ ಬಳಿಕ ಪತ್ನಿ ತನ್ನ ಐವರು ಮಕ್ಕಳ ಜೊತೆ ಮನೆಯಿಂದ ಕಣ್ಮರೆಯಾಗಿದ್ದಳು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣವೆಂದು ಕಾಣುತ್ತಿದೆ ಅಂತಾ ಠಾಕೂರ್ ಶಂಕೆ ವ್ಯಕ್ತಪಡಿಸಿದ್ದಾರೆ.