ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಇಬ್ಬರು ಶಂಕಿತ ಉಗ್ರರ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಇವರುಗಳು ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ.
ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿಯ ದಡದಲ್ಲಿ ಈ ಶಂಕಿತ ಉಗ್ರರು ಟ್ರಯಲ್ ಬ್ಲಾಸ್ಟ್ ನಡೆಸುತ್ತಿದ್ದರು ಎನ್ನಲಾಗಿದ್ದು, ವಿಚಾರಣೆ ವೇಳೆ ಈ ಸಂಗತಿ ಬಾಯಿ ಬಿಟ್ಟ ಬಳಿಕ ಅವರುಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ. ಅಲ್ಲದೆ ಇವರುಗಳ ಮೊಬೈಲ್ ಗಳನ್ನು ಪಡೆದು ಅದರಲ್ಲಿರುವ ಡೇಟಾ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
ಮಂಗಳೂರು ಮೂಲದ ಮಾಜ್ ಮುನೀರ್ ಅಹಮದ್ ಹಾಗೂ ಶಿವಮೊಗ್ಗ ಸಿದ್ದೇಶ್ವರ ನಗರದ ನಿವಾಸಿ ಸೈಯದ್ ಯಾಸಿನ್ ಬಂಧನಕ್ಕೊಳಗಾದವರಾಗಿದ್ದು, ಇವರೊಂದಿಗಿದ್ದ ತೀರ್ಥಹಳ್ಳಿ ಮೂಲದ ಶಾರೀಕ್ ಎಂಬಾತನಿಗಾಗಿ ಬಲೆ ಬೀಸಲಾಗಿದೆ. ಈ ಮೂವರು ಶಿವಮೊಗ್ಗದಲ್ಲಿ ಪಿಯುಸಿಯನ್ನು ಒಟ್ಟಿಗೆ ವ್ಯಾಸಂಗ ಮಾಡಿದ್ದು ಬಳಿಕ ವಿವಿಧ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೇರ್ಪಡೆಗೊಂಡಿದ್ದರು ಎನ್ನಲಾಗಿದೆ. ಐಸಿಸ್ ಸಂಪರ್ಕ ಬಂದ ಬಳಿಕ ಬಾಂಬ್ ತಯಾರಿಯನ್ನೂ ಕಲಿತಿದ್ದರು ಎಂದು ಹೇಳಲಾಗುತ್ತಿದೆ.