
ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅವರ ಪೊಲಿಟಿಕಲ್ ಜರ್ನಿ ಆರಂಭಕ್ಕೂ ಮುನ್ನವೇ ಅಂತ್ಯವಾದಂತಿದೆ. ಜಾರ್ಜ್ ಗ್ಯಾಲೋವೆ ನೇತೃತ್ವದ ವರ್ಕರ್ಸ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‌ನ ಸಂಸದೀಯ ಅಭ್ಯರ್ಥಿಯಾಗಿದ್ದ ಮಾಂಟಿ ಪನೇಸರ್, ತಮ್ಮ ಹೆಸರನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.
ಕೇವಲ ಒಂದೇ ವಾರದಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಭ್ರಮನಿರಸನಗೊಂಡ ಮಾಜಿ ಕ್ರಿಕೆಟರ್, ಅದರಿಂದ ದೂರವಾಗಿದ್ದಾರೆ. 42 ವರ್ಷದ ಪನೇಸರ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್‌ನ ಈಲಿಂಗ್ ಸೌಥಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದರು.
ಪನೇಸರ್ ರಾಜಕೀಯದಿಂದ ದೂರವಾಗಿದ್ದೇಕೆ ?
ಇಷ್ಟು ಬೇಗ ರಾಜಕೀಯದಿಂದ ದೂರವಾಗಲು ಕಾರಣವನ್ನು ಪನೇಸರ್ ವಿವರಿಸಲಿಲ್ಲ. ಆದರೆ ಮಾಧ್ಯಮಗಳ ನಿರಂತರ ಕ್ಲಿಷ್ಟಕರ ಸಂದರ್ಶನಗಳಿಂದ ಅವರು ಕಂಗಾಲಾಗಿದ್ದಾರೆ ಎನ್ನಲಾಗ್ತಿದೆ.
ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ NATOದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದುವರಿದ ಸದಸ್ಯತ್ವದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಪನೇಸರ್ ಹೆಣಗಾಡಿದರು.
ರಾಜಕೀಯವು ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾನಿನ್ನೂ ಕಲಿಯುತ್ತಿದ್ದೇನೆ ಎಂದು ಪನೇಸರ್ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ವರ್ಕರ್ಸ್ ಪಾರ್ಟಿಯ ಸಾರ್ವತ್ರಿಕ ಚುನಾವಣಾ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ರಾಜಕೀಯ ಮೌಲ್ಯಗಳಿಗೆ ಹೊಂದಿಕೆಯಾಗುವ ರಾಜಕೀಯ ನೆಲೆಯನ್ನು ಹುಡುಕಲು ನನಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅರಿತುಕೊಂಡಿದ್ದೇನೆ. ನಾನು ವರ್ಕರ್ಸ್ ಪಾರ್ಟಿಗೆ ಶುಭ ಹಾರೈಸುತ್ತೇನೆ, ಆದರೆ ನನ್ನ ರಾಜಕೀಯ ನೆಲೆಯನ್ನು ಪ್ರಬುದ್ಧಗೊಳಿಸಲು ಮತ್ತು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕು. ಹಾಗಾಗಿ ಮುಂದಿನ ಬಾರಿ ನಾನು ರಾಜಕೀಯ ವಿಕೆಟ್ ಪಡೆದಾಗ ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಸಿದ್ಧನಾಗಿರುತ್ತೇನೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ ಪನೇಸರ್ ಅವರು ಪ್ರಧಾನಿ ಹುದ್ದೆಗೇರುವ ಆಸೆಯನ್ನು ವ್ಯಕ್ತಪಡಿಸಿದ್ದರು. ದೇಶದ ಕಾರ್ಮಿಕರ ಧ್ವನಿಯಾಗಲು ಬಯಸುವುದಾಗಿ ಹೇಳಿದರು. ಮಾಂಟಿ ಪನೇಸರ್, 2006ರಲ್ಲಿ ಭಾರತ ಪ್ರವಾಸದ ಸಮಯದಲ್ಲಿ ಇಂಗ್ಲೆಂಡ್ ಅನ್ನು ಪ್ರತಿನಿಧಿಸಿದ ಮೊದಲ ಸಿಖ್ ಎನಿಸಿಕೊಂಡಿದ್ದರು. ಇಂಗ್ಲೆಂಡ್ ಪರ 50 ಟೆಸ್ಟ್ ಪಂದ್ಯಗಳಲ್ಲಿ 167 ವಿಕೆಟ್ ಪಡೆದಿದ್ದಾರೆ. ಅವರು 26 ಏಕದಿನ ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ.