ಟ್ರೆಡ್‌ಮಿಲ್ ಅತ್ಯಂತ ಪ್ರಸಿದ್ಧವಾದ ಫಿಟ್‌ನೆಸ್ ಸಾಧನ. ಮನೆಯೊಳಗೇ ವಾಕಿಂಗ್, ರನ್ನಿಂಗ್, ಜಾಗಿಂಗ್‌ಗೆ ಅದನ್ನು ಬಳಸಬಹುದು. ಆದರೆ ಟ್ರೆಡ್‌ಮಿಲ್ ಕೂಡ ಅಪಾಯಕಾರಿ. ಇತರ ವ್ಯಾಯಾಮ ಸಾಧನಗಳಿಗಿಂತ ಹೆಚ್ಚಾಗಿ ಟ್ರೆಡ್‌ಮಿಲ್ ಬಳಸುವ ಸಂದರ್ಭದಲ್ಲಿ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
2019 ರಲ್ಲಿ 22,000 ಟ್ರೆಡ್‌ಮಿಲ್ ಸಂಬಂಧಿತ ಗಾಯಗಳು ವರದಿಯಾಗಿವೆ. ಕಳೆದ ತಿಂಗಳು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟ್ರೆಡ್‌ಮಿಲ್‌ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲೇ ಗಾಯಗೊಂಡಿದ್ದರು. ಹಾಗಾಗಿ ಟ್ರೆಡ್‌ಮಿಲ್ ಬಳಸುವ ಮುನ್ನ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಟ್ರೆಡ್‌ಮಿಲ್ ವ್ಯಾಯಾಮದ ಸಮಯದಲ್ಲಿ ಸ್ಲಿಪ್ ಡಿಸ್ಕ್, ಉಳುಕು ಇಂತಹ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ಶಾರ್ಟ್ ಸರ್ಕ್ಯೂಟ್‌ನಿಂದ ಸಾವು ಕೂಡ ಸಂಭವಿಸಬಹುದು. ಗಂಭೀರವಾದ ಸುಟ್ಟಗಾಯ, ಪಾರ್ಶ್ವವಾಯು, ಮೂಳೆ ಮುರಿತಕ್ಕೂ ಇದು ಕಾರಣವಾಗಬಹುದು.
ನಿಧಾನವಾಗಿ ಪ್ರಾರಂಭಿಸಿ
ವಿಶೇಷವಾಗಿ ಟ್ರೆಡ್‌ಮಿಲ್ ಅನ್ನು ಮೊದಲ ಬಾರಿ ಬಳಸುತ್ತಿದ್ದರೆ ಹೆಚ್ಚಿನ ವೇಗದಲ್ಲಿ ಓಡಲು ಆತುರಪಡಬೇಡಿ. ಮೊದಲು ನಿಧಾನವಾಗಿ ನಡೆಯಲು ಪ್ರಾರಂಭಿಸಿ ಮತ್ತು ಕ್ರಮೇಣ ವೇಗವನ್ನು ಹೆಚ್ಚಿಸಿ.
ಹ್ಯಾಂಡಲ್ ಹಿಡಿದುಕೊಳ್ಳಿ
ಟ್ರೆಡ್‌ಮಿಲ್‌ನಲ್ಲಿ ಬ್ಯಾಲೆನ್ಸ್ ಮಾಡಲು ಆರಂಭದಲ್ಲಿ ಹ್ಯಾಂಡಲ್‌ನ ಸಹಾಯವನ್ನು ತೆಗೆದುಕೊಳ್ಳಿ. ಆತ್ಮವಿಶ್ವಾಸ ಬಂದಮೇಲೆ ನಿಧಾನವಾಗಿ ಹ್ಯಾಂಡಲ್ ಬಿಟ್ಟು ವಾಕ್ ಅಥವಾ ರನ್ನಿಂಗ್ ಮಾಡಬಹುದು.
ಸರಿಯಾದ ಶೂಗಳನ್ನು ಧರಿಸಿ
ಪಾದಗಳಿಗೆ ಸೂಕ್ತವಾದ ರನ್ನಿಂಗ್ ಶೂಗಳನ್ನು ಧರಿಸಿ. ಇದು ಪಾದದ ಉಳುಕು ಅಪಾಯವನ್ನು ಕಡಿಮೆ ಮಾಡುತ್ತದೆ.
ಯಾವಾಗಲೂ ಜಾಗರೂಕರಾಗಿರಿ
ಟ್ರೆಡ್‌ಮಿಲ್‌ನಲ್ಲಿ ನಡೆಯುವಾಗ ಪುಸ್ತಕವನ್ನು ಓದುವುದು ಅಥವಾ ಫೋನ್‌ನಲ್ಲಿ ಮಾತನಾಡುವುದನ್ನು ತಪ್ಪಿಸಿ. ನಿಮ್ಮ ಸಂಪೂರ್ಣ ಗಮನ ಯಂತ್ರದ ಮೇಲಿರಲಿ.
ತುರ್ತು ನಿಲುಗಡೆ ಬಟನ್ ಬಗ್ಗೆ ತಿಳಿದುಕೊಳ್ಳಿ
ಟ್ರೆಡ್‌ಮಿಲ್‌ನಲ್ಲಿ ಓಡುವಾಗ ಇದ್ದಕ್ಕಿದ್ದಂತೆ ನಿಲ್ಲಿಸಬೇಕಾದರೆ, ತುರ್ತು ಸ್ಟಾಪ್ ಬಟನ್ ಅನ್ನು ಒತ್ತಲು ಮರೆಯಬೇಡಿ.
ಹೈಡ್ರೇಟೆಡ್ ಆಗಿರಿ
ವ್ಯಾಯಾಮದ ಮೊದಲು ಮತ್ತು ನಂತರ ನೀರನ್ನು ಕುಡಿಯಿರಿ. ನಿರ್ಜಲೀಕರಣವು ತಲೆತಿರುಗುವಿಕೆಗೆ ಕಾರಣವಾಗಬಹುದು. ಇದರಿಂದ ಟ್ರೆಡ್‌ಮಿಲ್‌ನಲ್ಲಿ ಓಡುವ ಸಂದರ್ಭದಲ್ಲಿ ಅಪಾಯವಿರುತ್ತದೆ.
ವೇಗವನ್ನು ನಿರ್ವಹಿಸಿ
ನಿಮ್ಮ ದೇಹದ ವೇಗಕ್ಕೆ ಅನುಗುಣವಾಗಿ ಟ್ರೆಡ್‌ಮಿಲ್‌ನ ವೇಗವನ್ನು ಹೊಂದಿಸಿ. ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ಬೇಡ.