ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಸಾವಿರಾರು ಉಕ್ರೇನಿಯನ್ನರು ತಮ್ಮ ದೇಶ ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ಪಲಾಯನಗೈಯ್ಯುತ್ತಿದ್ದರೆ, 63-ವರ್ಷ ವಯಸ್ಸಿನ ನೇಪಾಳಿ ವ್ಯಕ್ತಿಯೊಬ್ಬರು 36 ವರ್ಷ ವಯಸ್ಸಿನ ತಮ್ಮ ಪುತ್ರನೊಂದಿಗೆ ಅಲ್ಲೇ ಇದ್ದು ಅಲ್ಲಿನ ಸಶಸ್ತ್ರ ಪಡೆಗಳಿಗೆ ನೆರವಾಗಲು ನಿರ್ಧರಿಸಿದ್ದಾರೆ.
ಜಯಂತ್ ಕುಮಾರ್ ನೇಪಾಳ್ (63) ತಮ್ಮ ತವರು ದೇಶವನ್ನು 1979ರಲ್ಲಿ ತೊರೆದು, ಉಕ್ರೇನ್‌ನಲ್ಲಿ ಉದ್ಯಮ ನಡೆಸಿಕೊಂಡಿದ್ದಾರೆ. ಕಳೆದ 40+ ವರ್ಷಗಳಿಂದ ಜಯಂತ್ ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗೆ ಅಲ್ಲೇ ನೆಲೆಸಿದ್ದಾರೆ.
“ಉಕ್ರೇನ್‌ನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಯುತ್ತಲೇ ಮಕ್ಕಳಿಗೆ ಸೇನೆ ಸೇರಲು ಹೇಳಲಾಗುತ್ತದೆ. ನಾನು ಇಲ್ಲಿ ನನ್ನ ಮಗ ಹಾಗೂ ಮಡದಿಯೊಂದಿಗೆ ವಾಸಿಸುತ್ತಿದ್ದೇನೆ. ರಷ್ಯನ್ನರ ವಿರುದ್ಧ ಇಲ್ಲೇ ಇದ್ದುಕೊಂಡು ಹೋರಾಡಲು ಉಕ್ರೇನ್ ಮಂದಿಗೆ ಹೇಳಲಾಗಿರುವ ಕಾರಣ ನಾನು ನನ್ನ ಮಗನನ್ನು ಹಾಗೇ ಬಿಡಲು ಸಾಧ್ಯವಿಲ್ಲ. ನಾವು ನೇಪಾಳದವರು ಆದರೂ 1979ರಿಂದ ಉಕ್ರೇನ್‌ನಲ್ಲಿ ವಾಸಿಸುತ್ತಿದ್ದೇವೆ” ಎನ್ನುತ್ತಾರೆ ಜಯಂತ್.
ಕಪ್ಪು ಸಮುದ್ರಕ್ಕೆ ಅಂಟಿಕೊಂಡಿರುವ ಉಕ್ರೇನ್ ದಕ್ಷಿಣ ತೀರದ ಒಡೆಸ್ಸಾ ಬಂದರು ಪಟ್ಟಣದಲ್ಲಿ ಜಯಂತ್ ಕುಮಾರ್ ಕುಟುಂಬ ವಾಸವಿದೆ.
ಫೆಬ್ರವರಿ 24ರಂದು ದಾಳಿಗೈದ ದಿನದಿಂದ ರಷ್ಯಾದ ಪಡೆಗಳು ದಕ್ಷಿಣ ಉಕ್ರೇನ್‌ನ ಒಳಹೊಕ್ಕಿವೆ. ಇಲ್ಲಿನ ಖೆರ್ಸನ್ ಹಾಗೂ ಮೌರಿಪಾಲ್ ಪಟ್ಟಣಗಳನ್ನು ರಷ್ಯನ್ನರು ವಶಪಡಿಸಿಕೊಂಡಿದ್ದು, ಒಡೆಸ್ಸಾವನ್ನು ಹಾಗೇ ಬಿಟ್ಟಿದ್ದಾರೆ.
ಬರ್ಲಿನ್‌ನಲ್ಲಿರುವ ನೇಪಾಳ ರಾಯಭಾರ ಕಚೇರಿಯೊಂದಿಗೆ ಕೆಲಸ ಮಾಡುತ್ತಿರುವ ಜಯಂತ್, ಉಕ್ರೇನ್‌ನಲ್ಲಿ ಸಿಲುಕಿರುವ ನೇಪಾಳಿ ಮಂದಿಯನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಲು ಶ್ರಮಿಸುತ್ತಿದ್ದಾರೆ.