ಈ ವರ್ಷ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕ್ಯಾನೆಸ್‌ನಲ್ಲಿ ಪ್ರತಿಭಟನೆ ಹಾಗೂ ಬಹಿರಂಗ ಅಭಿಪ್ರಾಯಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಸಮಾರಂಭದ ರೆಡ್ ಕಾರ್ಪೆಟ್ ಮೇಲೆ, ಮಹಿಳೆಯೊಬ್ಬರು ಉಕ್ರೇನಿಯನ್ ಧ್ವಜದ ಬಣ್ಣಗಳನ್ನು ಧರಿಸಿ ಪ್ರತಿಭಟಿಸಿದರು. ನಂತರ ಇರಾನ್‌ನಲ್ಲಿ ಮರಣದಂಡನೆಯನ್ನು ಕೊನೆಗೊಳಿಸಲು ಕರೆ ನೀಡಿದ ಇರಾನಿನ ಮಾಡೆಲ್ ಮಹ್ಲಾಘ ಜಬೇರಿ ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಿದ್ದು ವಿಶೇಷವಾಗಿತ್ತು.
ಮಹ್ಲಾಘಾ ಜಬೇರಿ ಅವರು ಇರಾನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಗಮನ ಸೆಳೆಯುವ ಉಡುಪನ್ನು ಧರಿಸಿದ್ದರು. ಅವರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಕ್ಯಾನೆಸ್ ರೆಡ್ ಕಾರ್ಪೆಟ್‌ನಲ್ಲಿ ನಡೆದಾಗ ಕಪ್ಪು ಬಾಡಿಕಾನ್ ಉಡುಪು ಧರಿಸಿದ್ದರು. ಆದರೆ, ಎಲ್ಲರ ಗಮನ ಸೆಳೆದದ್ದು ಉಡುಪಿನ ಕಾಲರ್. ಇದು ಒಂದು ಬಗೆಯ ಉಣ್ಣೆಬಟ್ಟೆ ಹಗ್ಗವಾಗಿದ್ದು, ಆಕೆಯ ಬಟ್ಟೆಯಿಂದ ಕುತ್ತಿಗೆಗೆ ನೇಣು ಹಾಕಿದ ರೂಪದಲ್ಲಿ ಜೋಡಿಸಲ್ಪಟ್ಟಿತ್ತು.
ಮಹ್ಲಾಘಾ ಜಬೇರಿ ಅವರು ಮರಣದಂಡನೆಯನ್ನು ನಿಲ್ಲಿಸಿ ಎಂಬ ಹೇಳಿಕೆಯೊಂದಿಗೆ ಉಡುಪನ್ನು ಧರಿಸಿರುವ ವಿಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ, ದೊಡ್ಡ ಚರ್ಚೆಯನ್ನು ಸೃಷ್ಟಿಸಿತು.
ಈ ವರ್ಷ ಇರಾನ್ ನಲ್ಲಿ ಮರಣದಂಡನೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇರಾನ್‌ನಲ್ಲಿನ ಕಠಿಣ ಪರಿಸ್ಥಿತಿಗಳನ್ನು ಎತ್ತಿ ತೋರಿಸಲು ಮಹ್ಲಾಘ ಜಬೇರಿ ಈ ಕ್ರಮವನ್ನು ಕೈಗೊಂಡಿದ್ದಾರೆ.