’ನನ್ನ ಅಭ್ಯರ್ಥಿ ಕಮಲದ ಚಿಹ್ನೆಯೇ ಹೊರತು ವ್ಯಕ್ತಿಯಲ್ಲ’ ಎಂದು ಹೇಳಿಕೊಂಡು ಕರ್ನಾಟಕದ ಕರಾವಳಿಯಲ್ಲಿ ಚುನಾವಣಾ ಸ್ಫರ್ಧೆಗಿಳಿದಿರುವ ಬಿಜೆಪಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದು ಬಂದಿದ್ದ ತನ್ನ ಅರ್ಧದಷ್ಟು ಶಾಸಕರಿಗೆ ಈ ಬಾರಿ ಟಿಕೆಟ್ ಕೊಟ್ಟಿಲ್ಲ.
ಎರಡೂ ಜಿಲ್ಲೆಗಳ 13 ಶಾಸಕರ ಪೈಕಿ ಬಿಜೆಪಿಯವರೇ 12 ಮಂದಿ ಇದ್ದಾರೆ. 2018ರಲ್ಲಿ ಹಿಂದುತ್ವದ ಅಲೆಯಲ್ಲಿ ಕರಾವಳಿ ಕರ್ನಾಟಕದಲ್ಲಿ ಅಕ್ಷರಶಃ ರಾರಾಜಿಸಿತ್ತು ಬಿಜೆಪಿ. ಈ ಬಾರಿ ಆರು ಮಂದಿ ಸಕ್ರಿಯ ಶಾಸಕರ ಬದಲಿಗೆ ಹೊಸ ಮುಖಗಳನ್ನು ಪರಿಚಯಿಸಿದೆ ಬಿಜೆಪಿ.
ಕರ್ನಾಟಕ ಕರಾವಳಿಯಲ್ಲಿರುವ ತನ್ನ ಕಾರ್ಯಕರ್ತರ ಬಲದ ಮೇಲೆ ಅಪಾರವಾದ ನಂಬಿಕೆ ಇಟ್ಟಿರುವ ಬಿಜೆಪಿಯ ಈ ಪ್ರಯೋಗ ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬ ಪ್ರಶ್ನೆಗಳು ಎದ್ದಿವೆ.
“ನಿರಂತರ ಆರ್ಥಿಕ ಸಮಸ್ಯೆಗಳ ಪರಿಣಾಮ ಆಡಳಿತ ವಿರೋಧಿ ಮನೋಭಾವ ಬಿಜೆಪಿಯ ಸಾಂಪ್ರದಾಯಿಕ ಮತದಾರರಲ್ಲಿ ನೆಲೆಸಿದೆ. ಜಾತಿ, ಸಮುದಾಯ ಹಾಗೂ ಆಡಳಿತ ವಿರೋಧಿ ಅಲೆಗಳನ್ನು ಪರಿಗಣಿಸಿ, ಎಚ್ಚರಿಕೆಯ ಲೆಕ್ಕಾಚಾರಗಳೊಂದಿಗೆ ಉಡುಪಿಯ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ,” ಎಂದು ಚುನಾವಣಾ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.
“ವಿಧಾನ ಸಭೆಯ ತಳಪಾಯ ಇರುವುದೇ ತಂತಮ್ಮ ಕ್ಷೇತ್ರಗಳ ಮತದಾರರ ಆಶಯಗಳನ್ನು ಪ್ರತಿನಿಧಿಸುವ ಶಾಸಕರಿಂದ. ಇದು ಜನರ ನಡುವಿನಿಂದ ಆಯ್ಕೆಯಾಗಿ ಬರುವ ನಾಯಕರಿಂದ ಸಾಧ್ಯವೇ ಹೊರತು ಹೈಕಮಾಂಡ್‌ಗಳ ಆಶಯಗಳನ್ನು ಬಲವಂತವಾಗಿ ಹೇರುವುದರಿಂದ ಅಲ್ಲ,” ಎಂದು ಚಿಂತಕ ರಾಜಾರಾಮ್ ತಲ್ಲೂರ್ ಹೇಳುತ್ತಾರೆ.